ಬೆಂಗಳೂರು : ಬಯಲುಸೀಮೆಯಲ್ಲಿ ಜಲಮೂಲ ಹುಡುಕುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ಪ್ರಶ್ನೋತ್ತರ ವೇಳೆಯಲ್ಲಿ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೆ.ಎಸ್.ಈಶ್ವರಪ್ಪ, ರಾಜ್ಯದ ಕೆಲವೆಡೆ 1500 ಅಡಿ ಭೂಮಿಯನ್ನು ಕೊರೆದರೂ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಭೂವಿಜ್ಞಾನ ಇಲಾಖೆ ಸಲಹೆ ಪಡೆದು ಸಾಧ್ಯವಾದಷ್ಟು ಕೊಳವೆ ಬಾವಿಗಳನ್ನು ಕೊರೆಸಲಾಗುವುದು. ನೀರನ್ನು ಬಯಲುಸೀಮೆ ಜಿಲ್ಲೆಗಳಿಗೂ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
2019-20ನೇ ಸಾಲಿನಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ವಿವೇಚನ ಅನುದಾನದಡಿ ಪ್ರತಿ ಜಿಲ್ಲೆಗೆ ಒಂದು ಕೋಟಿ ರೂಪಾಯಿಯನ್ನು ಕುಡಿಯುವ ನೀರಿನ ಕಾಮಗಾರಿಗಳಿಗೆ ನೀಡಲಾಗಿದೆ. ತುರ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಟಾಸ್ಕ್ ಫೋರ್ಸ್ ಯೋಜನೆಯಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಹೊಸಕೋಟೆ ತಾಲೂಕಿಗೆ ಪ್ರಸ್ತಕ ಸಾಲಿನಲ್ಲಿ ಕುಡಿಯುವ ನೀರಿನ ಕಾಮಗಾರಿಗಾಗಿ ವಿವಿಧ ಯೋಜನೆಗಳಡಿ ಒಟ್ಟು 999 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಮಾಲೂರು ತಾಲೂಕಿನಲ್ಲಿ ನಿರ್ಮಾಣಗೊಂಡಿರುವ ಡ್ಯಾಮ್ನಿಂದ ಸುಮಾರು 80 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆಯನ್ನು ಸ್ಥಗಿತಗೊಳಿಸಬಾರದು ಎಂದು ಮಾಲೂರು ಕ್ಷೇತ್ರದ ಶಾಸಕ ನಂಜೇಗೌಡ ಒತ್ತಾಯಿಸಿದ್ದಾರೆ. ಪ್ರಶ್ನೋತ್ತರ ವೇಳೆ ಮಾತನಾಡಿದ ಅವರು, ಡ್ಯಾಮ್ನ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅದನ್ನು ಪೂರ್ಣಗೊಳಿಸಿ ನೀರು ಪೂರೈಕೆ ಮಾಡಬೇಕೆಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಕೆ.ಎಸ್. ಈಶ್ವರಪ್ಪ, ಡ್ಯಾಮ್ನಲ್ಲಿ ನೀರೇ ಇರುವುದಿಲ್ಲ. ನೀರು ಪೂರೈಕೆ ಮಾಡಲು ಆಗುವುದಿಲ್ಲ. ಆದರೂ ಈ ಯೋಜನೆಗೆ ಹಣ ಖರ್ಚು ಮಾಡಲಾಗಿದೆ. ಪೈಪ್‍ಲೈನ್ ಅಳವಡಿಸಲಾಗಿದೆ. ಇಷ್ಟೆಲ್ಲಾ ಹಣ ಖರ್ಚು ಮಾಡಿದ ಮೇಲೆ ಯೋಜನೆ ಉಪಯೋಗವಿಲ್ಲ ಎಂದರೆ ತಪ್ಪಾಗುತ್ತದೆ. ಅದಕ್ಕಾಗಿ ಸ್ಥಳೀಯ ಶಾಸಕರ ಜತೆ ಚರ್ಚಿಸಿ ಯೋಜನೆಯನ್ನು ಮುಂದುವರೆಸಬೇಕೇ? ಅಥವಾ ನಿಲ್ಲಿಸಬೇಕೆ? ಎಂಬುದಾಗಿ ಚರ್ಚಿಸುವುದಾಗಿ ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಂಜೇಗೌಡರು, ಅಣೆಕಟ್ಟೆಯಲ್ಲಿ ನೀರಿದೆ. ಈಗಾಗಲೇ 20 ಹಳ್ಳಿಗಳಿಗೆ ನೀರು ಪೂರೈಕೆ ಮಾಡಲಾಗಿದೆ. ಇದ್ದಕ್ಕಿದ್ದಂತೆ ನೀರಿಲ್ಲ ಎಂದು ಹೇಳಿಕೆ ನೀಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಪೈಪ್‍ಲೈನ್ ಕಾಮಗಾರಿ ಪರಿಪೂರ್ಣಗೊಂಡಿಲ್ಲ. ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ಬಂಗಾರಪೇಟೆ, ಮಾಲೂರು ತಾಲೂಕಿಗೆ ಈ ಯೋಜನೆಯಿಂದ ಅನುಕೂಲವಾಗುತ್ತದೆ. ನೀವು ಖುದ್ದಾಗಿ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಮಾಡಿ ನಂತರ ನಿರ್ಧಾರ ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು. ಶಾಸಕ ನಂಜೇಗೌಡ ಮಾತಿಗೆ ಸಚಿವ ಈಶ್ವರಪ್ಪ ಸಮ್ಮತಿ ನೀಡಿದರು.