ಬೆಂಗಳೂರು: ಅಲ್ಪಸಂಖ್ಯಾತರ ವಿವಿಧ ಯೋಜನೆಯಲ್ಲಿ ಹಣ ಮಂಜೂರು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಇಂದು ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಹಾಗೂ ಕಾಂಗ್ರೆಸ್ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಪ್ರತ್ಯೇಕ ಪ್ರಶ್ನೆಗಳಿಗೆ ಉತ್ತರಿಸಿದ ಸಿಎಂ, ಐದು ಕೋಟಿ ರೂ. ಈಗಾಗಲೇ ಹಂತ ಹಂತವಾಗಿ ಬಿಡುಗಡೆ ಆಗುತ್ತಿದೆ. ಕೋವಿಡ್ನಿಂದ ಕೆಲ ಇಲಾಖೆಗಳಲ್ಲಿ ಅನುದಾನ ಕಡಿತ ಆಗಿತ್ತು. ಚರ್ಚ್ ಮತ್ತು ಬೇರೆ ಬೇರೆ ಕೆಲಸಕ್ಕೆ ಅನುದಾನ ಕೇಳಿದ್ದಾರೆ. ಶಾಸಕರು ವಿವರ ಕೊಟ್ಟರೆ ಅನುದಾನ ಬಿಡುಗಡೆಗೆ ಕ್ರಮ ವಹಿಸುತ್ತೇವೆ ಎಂದು ಹೇಳಿದರು.
2018 -19 ರಲ್ಲಿ ಐದು ಕೋಟಿ ಬಿಡುಗಡೆ ಆಗಿತ್ತು. ಕೋವಿಡ್ ಕಾರಣದಿಂದ ಕೆಲವು ಕಡಿತ ಆಗಿದೆ. ನಿರ್ದಿಷ್ಟವಾಗಿ ಯಾವ ಸಮುದಾಯ ಭವನ, ಚರ್ಚ್ ಎಂದು ತಿಳಿಸಿದರೆ ಹಣ ನೀಡುತ್ತೇವೆ ಎಂದರು. ಇದಕ್ಕೂ ಮುನ್ನ ಹೆಚ್.ಡಿ.ರೇವಣ್ಣ ಮಾತನಾಡಿ, ಬಿಜೆಪಿ ಸರ್ಕಾರ ಬಂದ ನಂತರ ನನ್ನ ಕ್ಷೇತ್ರದ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅನುದಾನ ಕೊಟ್ಟಿಲ್ಲ. ಮೈತ್ರಿ ಸರ್ಕಾರ ಬಂದಾಗ 5 ಕೋಟಿ ಅನುದಾನ ಮಂಜೂರು ಆಗಿತ್ತು. ಆದರೆ ಅದನ್ನು ತಡೆ ಹಿಡಿಯುವ ಕೆಲಸ ಮಾಡಿದೆ ಎಂದು ಹೇಳಿದರು.
ಶಾಸಕ ಡಾ.ಯತೀಂದ್ರ ಅವರು ಪ್ರಸ್ತಾಪ ಮಾಡಿ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ವರುಣಾ ಕ್ಷೇತ್ರಕ್ಕೆ ಹಣ ಬಂದಿಲ್ಲ. ಚರ್ಚ್, ಅಲ್ಪಸಂಖ್ಯಾತ ಸಮುದಾಯ ಭವನ ಹಳೆಯದಾಗಿದೆ. ಅದನ್ನೆಲ್ಲಾ ಸರಿ ಮಾಡಬೇಕು. ಅಲ್ಪಸಂಖ್ಯಾತ ನಿಗಮದಿಂದ ಹಣ ಬಿಡುಗಡೆಗೆ ಒತ್ತಾಯ ಮಾಡಿದರು.
ಹಣ ಬಿಡುಗಡೆ: ಶೀಘ್ರವೇ ಸಣ್ಣ ಗುತ್ತಿಗೆದಾರರ ಹಣವನ್ನೂ ಬಿಡುಗಡೆ ಮಾಡುತ್ತೇವೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದರು. ಶಾಸಕ ಹೆಚ್.ಡಿ.ರೇವಣ್ಣ ಅವರು ಮಾಡಿದ ಪ್ರಸ್ತಾಪಕ್ಕೆ ಉತ್ತರ ನೀಡಿದ ಸಚಿವರು, ದೊಡ್ಡ ಗುತ್ತುಗೆದಾರರ ಹಣ ಆದ್ಯತೆ ಮೇಲೆ ನೀಡಲಾಗ್ತಿದೆ ಎಂದು ಹೇಳಿದರು. ಇದಕ್ಕೂ ಮುನ್ನ ಹೆಚ್.ಡಿ.ರೇವಣ್ಣ ಮಾತನಾಡಿ, ಸಣ್ಣ ಗುತ್ತಿಗೆದಾರರ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಐದು, ಹತ್ತು ಲಕ್ಷ ಕಾಮಗಾರಿ ಬಿಲ್ ಬಿಡುಗಡೆ ಮಾಡಿಲ್ಲ. ಕಳೆದ ಎರಡು ವರ್ಷಗಳಿಂದ ಯಾವುದೇ ಹಣ ಬಿಡುಗಡೆ ಆಗಿಲ್ಲ. ಕೂಡಲೇ ಹಣ ಬಿಡುಗಡೆ ಮಾಡುವಂತೆ ಒತ್ತಾಯ ಮಾಡಿದರು.
ಇದನ್ನೂ ಓದಿ: 'ನಾಯಿ' ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ; ಕ್ಷಮೆಯಾಚಿಸಲ್ಲ ಎಂದ ಖರ್ಗೆ