ಬೆಂಗಳೂರು: ವಿಜಯಪುರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸರ್ಕಾರ ಬದ್ಧವಾಗಿದೆ. ಆ ಕೆಲಸವನ್ನು ನಾವು ಮಾಡ್ತಾ ಇದ್ದೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಇಂದು ಕಾಂಗ್ರೆಸ್ ಶಾಸಕ ಯಶವಂತರಾಯ ಗೌಡ ಪಾಟೀಲ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ 2006ರಲ್ಲಿ ಪ್ರಾರಂಭವಾಗಿದೆ. 2,815 ಎಚ್ಪಿ ಸಾಮರ್ಥ್ಯದ ಒಟ್ಟು 8 ಪಂಪ್ ಸೆಟ್ಗಳನ್ನ ಹಾಕಿದ್ದೇವೆ. ಅದರಲ್ಲಿ 5 ಪಂಪ್ಗಳು 2015/16 ರಲ್ಲಿಯೇ ರಿಪೇರಿಗೆ ಬಂದಿದ್ದವು. 7.75 ಕೋಟಿ ರೂ. ಖರ್ಚು ಮಾಡಿ 7 ಪಂಪ್ಗಳನ್ನ ರಿಪೇರಿ ಮಾಡಲಾಗಿದ್ದು, 5 ವರ್ಷ ಅದೇ ಕಂಪನಿಗಳಿಗೆ ನಿರ್ವಹಣೆಗೆ ನೀಡಿದ್ದೇವೆ.
ಈಗಾಗಲೇ 4 ಪಂಪ್ಗಳ ಕಾರ್ಯಾರಂಭಿಸಿದ್ದು, 2 ಪಂಪ್ಗಳ ರಿಪೇರಿ ಈ ತಿಂಗಳಲ್ಲೇ ಮುಗಿಯುತ್ತದೆ. ಒಟ್ಟಾರೆ 7 ಪಂಪ್ಗಳು ಕಾರ್ಯ ಶುರು ಮಾಡುತ್ತವೆ ಎಂದರು. ಇನ್ನು, 147 ಕಿಮೀವರೆಗೂ ರೈತರು ನೀರು ಬಿಡ್ಬೇಕು ಎಂದು ಮನವಿ ಮಾಡಿದ್ದಾರೆ. ಆದರೆ, ಅದಕ್ಕೆ ತಾಂತ್ರಿಕ ಸಮಸ್ಯೆಗಳಿದ್ದು, 97 ಕಿಮೀರವರೆಗೂ ನೀರು ಕೊಡ್ತಾ ಇದೀವಿ, 42 ಸಾವಿರ ಹೆಕ್ಟೇರ್ನಷ್ಟು ನೀರಾವರಿ ಮಾಡಿಕೊಡುತ್ತೇವೆ. ಕುಡಿಯುವ ನೀರಿಗಾಗಿಯೇ ಕೊಡ್ತಾ ಇದೀವಿ. ಇದಕ್ಕಾಗಿ ಸ್ಕಾಡಾ ಗೇಟ್ ಅಳವಡಿಸಬೇಕು ಅದನ್ನ ಆಲೋಚನೆ ಮಾಡುತ್ತೇವೆ ಎಂದು ತಿಳಿಸಿದರು.
ಇನ್ನು ರೇವಣ್ಣ ಸಿದ್ದೇಶ್ವರ ಏತನೀರಾವರಿ ಯೋಜನೆ ಕುರಿತು ಪ್ರತಿಕ್ರಿಸಿದ ಅವರು ರೇವಣ್ಣ ಸಿದ್ದೇಶ್ವರ ಯೋಜನೆ ಸಣ್ಣ ಪ್ರಾಜೆಕ್ಟ್ ಅಲ್ಲ ಅದು 3,000 ಕೋಟಿ ರೂ. ಮೌಲ್ಯದ ಯೋಜನೆ. ಈ ಹಿಂದೆ ಬೊಮ್ಮಾಯಿ ಅವರು ಐದು ವರ್ಷಗಳ ಹಿಂದೆ ನೀರಾವರಿ ಇಲಾಖೆಯ ಮಂತ್ರಿಯಾಗಿದ್ದಾಗಲೂ ಅದೇ ಬೇಡಿಕೆ ಇತ್ತು.
ಆದರೆ, ಯಾರು ಮಾಡಿರಲಿಲ್ಲ. ಸಿಎಂ 3,000 ಕೋಟಿ ರೂ. ಯೋಜನೆಗೆ ಒಪ್ಪಿಗೆ ಕೊಟ್ಟಿದ್ದಾರೆ. ಈಗಾಗಲೇ ಮೊದಲನೇ ಹಂತದ ಕಾಮಗಾರಿಗೆ 770 ಕೋಟಿ ರೂಪಾಯಿಗೆ ಅನುಮೋದನೆ ನೀಡಿ ಟೆಂಡರ್ ಪ್ರಕ್ರಿಯೆ ಶುರುವಾಗಿದೆ. ಎರಡನೇ ಹಂತದ ಕಾಮಗಾರಿಗೂ ಶೀಘ್ರದಲ್ಲಿ ಟೆಂಡರ್ ಕರೆಯುತ್ತೇವೆ ಎಂದು ಹೇಳಿದರು.
ರೇವಣ್ಣ ಸಿದ್ದೇಶ್ವರ ಏತನೀರಾವರಿ ಯೋಜನೆಯಿಂದ ಒಂದು ಹುಲ್ಲು ಕಡ್ಡಿ ಬೆಳೆಯದ ವಿಜಯಪುರ ಜಿಲ್ಲೆಯ 57 ಹಳ್ಳಿಗಳಿಗೆ ನೀರಾವರಿಯಾಗುತ್ತದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಕಡಿಮೆಗೊಳ್ಳಲಿದೆ. 5 ವರ್ಷ ನಿಮ್ಮ ಹತ್ತಿರ ಸರ್ಕಾರ ಇದ್ದರು ನೀವು ಏನು ಮಾಡ್ಲಿಲ್ಲ, ಕಳಕಳಿ ಕಾಳಜಿಯಿಂದ ನಮ್ಮ ಸರ್ಕಾರ ಮಾಡುತ್ತದೆ ಎಂದು ತಿಳಿಸಿದರು.
ಕಾರಂಜಾ ಕಾಲುವೆಯ ಮರುನವೀಕರಣ: ಕಾರಂಜಾ ಏತನೀರಾವರಿ ಯೋಜನೆಯ ಕಾಲುವೆಯ ಆಧುನೀಕರಣ ಆಗದೇ ಇರುವುದರಿಂದ ರೈತರ ಹೊಲದಲ್ಲಿ ನೀರು ನುಗ್ಗಿ ಬೆಳೆ ಹಾನಿಯಾಗಿದೆ ಎಂದು ಶಾಸಕ ಬಂಡೇಪ್ಪ ಕಾಶೆಂಪೂರ್ ಅವರ ಪರವಾಗಿ ಶಾಸಕ ವೆಂಕಟರಾವ್ ನಾಡಗೌಡ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿ, 21 ಕಿಲೋ ಮೀಟರ್ ಮುಖ್ಯ ಕಾಲುವೆಗೆ 1993 - 94 ರಲ್ಲಿ ಶಭಾದ್ ಸ್ಟೋನ್ಗಳನ್ನು ಹಾಕಿದ್ದರು. ಹೀಗಾಗಿ ನೀರು ಸರಿಯಾಗಿ ಹೋಗ್ತಾ ಇರ್ಲಿಲ್ಲ. ಒಟ್ಟು 45 ಕೋಟಿ ರೂಪಾಯಿ ಯೋಜನೆ ಇದಾಗಿದ್ದು, ಈಗಾಗಲೇ 32.5 ಕೋಟಿ ರೂ. ಖರ್ಚು ಮಾಡಲಾಗಿದೆ. ಕೆಲ ತಿಂಗಳಲ್ಲಿ ಬಾಕಿ ಉಳಿದಿರುವುದನ್ನು ಮರುನವೀಕರಣ ಮಾಡಿಸುತ್ತೇವೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳಿಂದ ವರದಿ ತರಿಸಿ ಪರಿಶೀಲನೆ: ಕಾರಂಜಾ ಏತ ನೀರಾವರಿ ಯೋಜನೆಯಿಂದ ಮನೆಗಳಿಗೆ ನೀರು ನುಗ್ಗುತ್ತಿದೆ, ಅವುಗಳನ್ನು ಸ್ಥಳಾಂತರ ಮಾಡಬೇಕು ಎಂಬ ಶಾಸಕ ರಾಜಶೇಖರ್ ಪಾಟೀಲ್ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿ, 1993-94ರಲ್ಲಿ ಆಗಿರುವ ಪ್ರಾಜೆಕ್ಟ್ ಇದು. ಅವತ್ತು ಸರ್ವೆ ಮಾಡಿ ಎಫ್ಆರ್ನಲ್ಲಿ ಬಂದಿರುವುದಕ್ಕೆ ಪರಿಹಾರ ಹಾಗೂ ಸ್ಥಳಾಂತರ ಮಾಡುವ ಕೆಲಸ ಮಾಡಿದ್ದಾರೆ. ಈಗ ಹೆಚ್ಚುವರಿ ನೀರು ಬರ್ತಾ ಇದೆ ಅಂತ ಹೇಳಿದ್ದಾರೆ. ನೀರು ಹೆಚ್ಚು ಬರ್ತಾ ಇದ್ದರೆ ಖಂಡಿತವಾಗಿಯೂ ಸರ್ಕಾರ ಅದನ್ನ ಪರಿಶೀಲನೆ ಮಾಡುತ್ತದೆ.
ಮನೆಯೊಳಗೆ ನೀರು ನುಗ್ಗಿದ್ರೆ ಪರಿಹಾರವಾಗಿ 10 ಸಾವಿರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆ ಗ್ರಾಮ ಪೂರ್ಣ ಸ್ಥಳಾಂತರ ಮಾಡ್ಬೇಕಾಗಿರೊ ಬಗ್ಗೆ ಸರ್ವೇ ಮಾಡಿದ್ದಾರೆ. ಸರ್ವೆ ಮಾಡಿ ನೀರು ಎಲ್ಲಿವರೆಗೂ ಹೋಗಿದೆ ಎನ್ನುವ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ.
ಅನುದಾನದ ಲಭ್ಯತೆ ಆಧಾರದ ಮೇಲೆ ಬ್ರಿಡ್ಜ್ ಕಂ ಬ್ಯಾರೇಜ್ : ಚಳ್ಳಕೆರೆಯ ವೇದಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ವಿಚಾರವಾಗಿ ಶಾಸಕ ರಘುಮೂರ್ತಿ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿ, ಬಜೆಟ್ನಲ್ಲಿ 25 ಕೋಟಿ ರೂ. ಅನುದಾನವನ್ನು ಘೋಷಣೆ ಮಾಡಿರಲಿಲ್ಲ. ಬಜೆಟ್ ಭಾಷಣದಲ್ಲಿ ಘೋಷಣೆ ಆಗಿರುವ ಯೋಜನೆ ಇದು. ನಾವು ತಾರತಮ್ಯ ಮಾಡುವ ಪ್ರಶ್ನೆ ಇಲ್ಲ. ಬ್ರಿಡ್ಜ್ ಕಂ ಬ್ಯಾರೇಜ್ ತಗೊಳ್ಬೇಕು ಎಂಬುದು ನಮಗೂ ಇದೆ.
ನಮ್ಮ ಇಲಾಖೆಗೆ ಪ್ರತಿ ವರ್ಷ ಬಜೆಟ್ನಲ್ಲಿ 18 ರಿಂದ 19 ಸಾವಿರ ಕೋಟಿ ಅನುದಾನ ಸಿಗ್ತಾ ಇದೆ. ನಮ್ಮ ಇಲಾಖೆಗೆ ಕಾರ್ಯಭಾರ ಇರುವಂತದ್ದು, 1 ಲಕ್ಷದ 2 ಸಾವಿರ ಕೋಟಿಗಿಂತ ಹೆಚ್ಚಿದೆ. ಪ್ರತಿ ವರ್ಷ ಘೋಷಣೆ ಮಾಡ್ತಾ ಹೋಗಿದಾರೆ, ಪ್ರತಿ ವರ್ಷವೂ ಹೆಚ್ಚಾಗುತ್ತಿದೆ. ಹಾಗಾಗಿ ಅನುದಾನದ ಲಭ್ಯತೆ ಆಧಾರದ ಮೇಲೆ ತೆಗೆದುಕೊಳ್ಳಬೇಕು ಎಂಬ ಉದ್ದೇಶ ಇದೆ. ಯಾವುದೇ ತಾರತಮ್ಯ ಮಾಡ್ಬೇಕು ಎಂಬ ಉದ್ದೇಶ ಇಲ್ಲ ಎಂದರು.
ಗುಂಡಾಲ್ ಜಲಾಶಯದ ದುರಸ್ತಿಗೆ ಕ್ರಮ: ಚಾಮರಾಜಪೇಟೆಯ ಗುಂಡಾಲ್ ಜಲಾಶಯದ ನಿರ್ವಹಣೆಗೆ ಹೆಚ್ಚಿನ ಅನುದಾನ ಒದಗಿಸುವಂತೆ ಶಾಸಕ ಆರ್ ನರೇಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಗೋವಿಂದ ಕಾರಜೋಳ ಅವರು, ಗುಂಡಾಲ್ ಜಲಾಶಯ 1980ರಿಂದ ಇಲ್ಲಿಯವರೆಗೂ ನಾಲ್ಕೇ ಸಲ ಭರ್ತಿಯಾಗಿದೆ.
ಹೀಗಾಗಿ ಕಾಲುವೆಗಳು ದುರಸ್ತಿಯಾಗದೇ ಅವ್ಯವಸ್ಥೆ ಆಗಿರುವುದು ನಿಜ. ಆದರೂ ಕೂಡ ಪ್ರತಿ ವರ್ಷ ಅನುದಾನ ನೀಡಿದ್ದೀವಿ. ಅಷ್ಟು ಸಾಕಾಗುತ್ತಿಲ್ಲ ಎಂದು ಹೇಳಿದ್ದಾರೆ. ಖಂಡಿತವಾಗಿಯೂ 15 ಸಾವಿರ ಎಕರೆಗೆ ನೀರಾವರಿ ಆಗುವಂತಹ ಜಲಾಶಯ ಅದು, ಅದರ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: ಹೊಸ ಶಿಕ್ಷಣ ನೀತಿ ಜಾರಿ ವೇಳೆ ಹಾಲಿ ಅಂಗನವಾಡಿ ಕಾರ್ಯಕರ್ತೆಯರ ಕೈಬಿಡಲ್ಲ: ಹಾಲಪ್ಪ ಆಚಾರ್