ಬೆಂಗಳೂರು: ಚುನಾವಣೆ ಸಂದರ್ಭ ಬಂದಾಗ ರಾಜಕಾರಣಿಗಳು ಮತದಾರರಿಗೆ ಹಲವು ರೀತಿ ಆಮಿಷ ಒಡ್ಡುವುದು ಸಾಮಾನ್ಯ. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ನಾನಾ ರೀತಿಯ ಆಮಿಷಗಳನ್ನು ಒಡ್ಡಲಾಗುತ್ತಿದೆ. ಇದರ ಜೊತೆಗೆ ರಾಜಕಾರಣಿಗಳು ಮತ್ತು ಟಿಕೆಟ್ ಆಕಾಂಕ್ಷಿಗಳು ಜ್ಯೋತಿಷಿಗಳ ಮೊರೆ ಹೋಗುತ್ತಿದ್ದಾರೆ. ಹಾಗಾಗಿ, ಅವರಿಗೂ ಬೇಡಿಕೆ ಹೆಚ್ಚಿದೆ. ಇಷ್ಟೇ ಅಲ್ಲದೆ, ಹಲವು ರೀತಿಯ ಪೂಜೆ, ಹೋಮ-ಹವನವೂ ನಡೆಯುತ್ತಿದೆ. ಹಳ್ಳಿ, ಹಳ್ಳಿಗಳಲ್ಲೂ ರಾಜಕಾರಣಿಗಳು ದೇವಸ್ಥಾನಗಳಿಗೆ ಎಡತಾಕುವುದು ಸಾಮಾನ್ಯವಾಗಿದೆ.
ದೇವಾಲಯಗಳಿಗೆ ಭೇಟಿ ನೀಡಿ, ಆಯಾ ಸಮುದಾಯಗಳ ಮತ ಸೆಳೆಯುವ ತಂತ್ರದ ಭಾಗವಾಗಿ ರಾಜಕೀಯ ನಾಯಕರು ಹೋದ ಕಡೆಯಲ್ಲಿ ದೇವರಿಗೆ ಕೈಮುಗಿಯುವುದು ಹೆಚ್ಚು ಕಂಡುಬರುತ್ತಿದೆ. ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಜ್ಯೋತಿಷಿಗಳಿಗೂ ಬೇಡಿಕೆ ಹೆಚ್ಚಿದೆ ಎಂತಲೇ ಹೇಳಬಹುದು. ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವುದನ್ನು ಹೊರತುಪಡಿಸಿದರೆ ಕಾಂಗ್ರೆಸ್ ಹಾಗೂ ಬಿಜೆಪಿ ಇನ್ನೂ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.
ಹಾಗಾಗಿ, ಟಿಕೆಟ್ ಸಿಗುತ್ತದೋ, ಇಲ್ಲವೋ ಎಂಬುದರ ಬಗ್ಗೆ ಅನುಮಾನವಿದ್ದು, ಅದರ ಬಗ್ಗೆ ಕೇಳಲು ಟಿಕೆಟ್ ಆಕಾಂಕ್ಷಿಗಳು ಜ್ಯೋತಿಷಿಗಳ ಮೊರೆ ಹೋಗುತ್ತಿದ್ದಾರೆ. ರಾಶಿ ಫಲ, ಯಾವ ದೇವರ ಪೂಜೆ ಮಾಡಿಸಬೇಕು. ಮತದಾರರಿಗೆ ಗಿಫ್ಟ್ ಯಾವ ಸಂದರ್ಭದಲ್ಲಿ ನೀಡಬೇಕು. ಮತದಾರರ ಭೇಟಿಗೆ ಹೋಗುವ ವೇಳೆ ಯಾವ ಬಣ್ಣದ ಬಟ್ಟೆ ಧರಿಸಬೇಕು. ಮನೆಯಿಂದ ಹೊರಡುವಾಗ ಯಾವ ದಿಕ್ಕಿನಿಂದ ಪ್ರಮಾಣ ಮಾಡಬೇಕು ಎಂಬುದನ್ನೂ ಕೇಳುವವರು ಇದ್ದಾರೆ. ಹಾಗಾಗಿ, ಜ್ಯೋತಿಷಿಗಳಿಗೆ ಬೇಡಿಕೆ ಹೆಚ್ಚಿದೆ.
ಹೋಮ, ಹವನವೂ ಹೆಚ್ಚು: ತಮ್ಮ ಗೆಲುವಿನ ದಾರಿ ಸುಗಮವಾಗಲಿ ಎಂದು ಸುದರ್ಶನ ಹೋಮ, ಪ್ರತ್ಯಂಗೀರಾ ಹೋಮ, ಶನೇಶ್ವರನ ಜಪ ಹೀಗೆ ಹಲವು ಬಗೆಯ ಪೂಜೆ-ಹೋಮಗಳನ್ನು ಮಾಡಿಸಲಾಗುತ್ತದೆ. ಇದರ ಜೊತೆಗೆ ವಿವಿಧ ದೇವಸ್ಥಾನ-ಮಠಗಳಿಗೆ ಭೇಟಿ ಕೊಡುವುದು, ಮನೆದೇವರ ಪೂಜೆ ಮಾಡುವುದು ಕೂಡ ನಡೆಯುತ್ತದೆ. ಇನ್ನು ಚುನಾವಣೆ ಸಮೀಪ ಬಂದಾಗ, ಚುನಾವಣೆಯನ್ನು ಎದುರಿಸಲು ರಾಜಕೀಯ ನಾಯಕರು ಪ್ರತ್ಯಂಗಿರಾ ಹೋಮ ಹವನ ಮೊರೆ ಹೋಗುವುದು ಸಾಮಾನ್ಯ. ರಾಜಕೀಯ ಜೀವನದಲ್ಲಿ ಅಡ್ಡಿಯಾಗುವ ಶತ್ರುಗಳನ್ನು ಸಂಹಾರ ಮಾಡಿಸಲು ಈ ಪ್ರತ್ಯಂಗಿರಾ ಹೋಮ ಮಾಡಿಸಲಾಗುತ್ತದೆ. ಚುನಾವಣೆಯ ಗಿಲುವಿನ ಹಿನ್ನೆಲೆಯಲ್ಲಿ ಈ ಹೋಮವನ್ನು ಬಹುತೇಕರು ಯಾರಿಗೂ ತಿಳಿಯದಂತೆ ಮಾಡಿಸುತ್ತಾರೆ. ಇದು ಹೊರಗೆ ಗೊತ್ತಾಗುವುದೇ ಇಲ್ಲ ಎನ್ನುತ್ತಾರೆ ಅರ್ಚಕರೊಬ್ಬರು.
ಅಭ್ಯರ್ಥಿಗಳು ಪಕ್ಷಗಳಿಂದ ತಾವು ಪಡೆದುಕೊಳ್ಳುವ ಬಿ ಫಾರಂ ಅನ್ನು ದೇವಸ್ಥಾನಗಳಿಗೆ ತೆಗೆದುಕೊಂಡು ಹೊಗಿ ಪೂಜೆ ನೆರವೇರಿಸುತ್ತಾರೆ. ಬಳಿಕ ನಾಮಪತ್ರ ಸಲ್ಲಿಸಲು ಜ್ಯೋತಿಷಿಗಳ ಬಳಿ ಸಮಯ ಕೇಳುತ್ತಾರೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಪಕ್ಷಗಳು ಜ್ಯೋತಿಷಿಗಳ ಮೊರೆ ಹೋಗುತ್ತವೆ. ಎಷ್ಟು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬೇಕು? ಯಾವ ದಿನಾಂಕ, ಸಮಯದಲ್ಲಿ ಮಾಡಬೇಕು ಎಂಬುದನ್ನು ಕೇಳಿಯೇ ಪಟ್ಟಿ ಪ್ರಕಟಿಸುವ ಪದ್ಧತಿ ಬಹುತೇಕ ಎಲ್ಲ ಪಕ್ಷಗಳಲ್ಲೂ ಇದೆ.
ಇನ್ನು ಕೆಲ ರಾಜಕಾರಣಿಗಳೂ ಕೇರಳದ ಜ್ಯೋತಿಷಿಗಳ ಮೊರೆ ಹೋಗುವುದು ಉಂಟು. ಈ ಹಿಂದೆಯೂ ಸಹ ಪ್ರತಿಷ್ಠಿತ ರಾಜಕಾರಣಿಗಳು ಕೇರಳದಲ್ಲಿ ಯಜ್ಞ, ಯಾಗಾದಿಗಳನ್ನು ಮಾಡಿಸಿದ್ದರು. ಇದರ ಜೊತೆಗೆ ಪ್ರತಿಷ್ಠಿತ ದೇವಾಲಯಗಳಲ್ಲೂ ಹೋಮ ಮಾಡಿಸಿದ್ದರು. ಹಾಗಾಗಿ, ಪೂಜೆ ಮಾಡಿಸುವವರಿಗೆ ಚುನಾವಣೆಗಳು ಬಂದಾಗ ಹೆಚ್ಚು ಬೇಡಿಕೆ ಬರುತ್ತದೆ. ಇನ್ನು ಆನೇಕ ರಾಜಕಾರಣಿಗಳು ತಮ್ಮ ಜಾತಕ ಹಿಡಿದು ಜ್ಯೋತಿಷಿಗಳನ್ನು ಭೇಟಿ ಮಾಡಿ ರಾಜಕೀಯ ಭವಿಷ್ಯ ಕೇಳುತ್ತಾರೆ. ಜ್ಯೋತಿಷಿಗಳ ಸಲಹೆಯಂತೆ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಕೆಲವರು ಕೊಳ್ಳೆಗಾಲದ ಜ್ಯೋತಿಷಿಗಳಿಂದಲೂ ಸಲಹೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾಟ ಮಂತ್ರವನ್ನೂ ಬಿಟ್ಟಿಲ್ಲ: ಕೆಲವರು ತಮ್ಮ ಶತ್ರು ನಾಶಕ್ಕೆ ಮಾಟ ಮಂತ್ರ ಮಾಡಿಸುವುದೂ ನಡೆಯುತ್ತಿದೆ. ಲಿಂಬೆಹಣ್ಣು, ತಾಯತ, ಕಾಯಿ, ಕರಿದಾರದಿಂದ ಮಾಟ ಮಂತ್ರ ಮಾಡಿಸಿ ಓಡಾಡುವ ದಾರಿಯಲ್ಲಿ, ಶತ್ರುಗಳ ಕಚೇರಿ, ಮನೆ ಸುತ್ತಮುತ್ತ ಹಾಕುತ್ತಿರುವ ಪ್ರಕರಣಗಳೂ ವರದಿಯಾಗುತ್ತಿವೆ. ರಾಯಚೂರು ಜಿಲ್ಲೆ ಲಿಂಗಸಗೂರು ಜೆಡಿಎಸ್ ಅಭ್ಯರ್ಥಿ ಸಿದ್ದು ಬಂಡಿ ಅವರ ಮನೆ ಮತ್ತು ಕಚೇರಿ ಮುಂದೆ ಮಾಟ ಮಂತ್ರ ಮಾಡಿಸಿರುವ ಪ್ರಕರಣ ದೊಡ್ಡ ಸುದ್ದಿಯಾಗಿತ್ತು. ಇದರ ಜೊತೆಗೆ ಆಡಳಿತ ಮತ್ತು ಪ್ರತಿಪಕ್ಷಗಳ ಅಭ್ಯರ್ಥಿಗಳ ನಡುವಿನ ವಾಗ್ವಾದಕ್ಕೂ ಕಾರಣವಾಗಿದೆ.
ಮಂಗಳಮುಖಿಯವರಿಂದಲೂ ಆಶೀರ್ವಾದ: ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ, ಫಲಿತಾಂಶದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ರಾಜಕಾರಣಿಗಳು ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ಮತ್ತೆ ಕೆಲವರು ಮಂಗಳ ಮುಖಿಯರಿಗೆ ಉಡಿ ತುಂಬುವ ಮೂಲಕ ವಿಶೇಷ ಪೂಜೆ ಪುನಸ್ಕಾರ ಮಾಡುತ್ತಾರೆ. ಸೀರೆ, ಬೆಳ್ಳಿ ದೀಪ, ಅರಿಶಿಣ-ಕುಂಕುಮ ಬಟ್ಟಲು ಸೇರಿದಂತೆ ಮತ್ತಿತರ ವಸ್ತುಗಳನ್ನು ಅವರಿಗೆ ನೀಡಿ ಆಶೀರ್ವಾದ ಪಡೆದುಕೊಳ್ಳುತ್ತಾರೆ.
ಜೆಡಿಎಸ್ ಕಚೇರಿಯಲ್ಲಿ ಗಂಗಾಪೂಜೆ: ಜೆಡಿಎಸ್ ಕಚೇರಿಯಲ್ಲಿ ಗಂಗಾ ಪೂಜೆ ನಡೆಯುತ್ತಿದೆ. ಬ್ರಹ್ಮ ಕಳಸ ಪ್ರತಿಷ್ಠಾಪನೆ ಮಾಡಲಾಗಿದ್ದು, ಒಂದು ವರ್ಷ ಈ ಕಳಸಕ್ಕೆ ಪೂಜೆ ನಡೆಯುತ್ತಿದೆ. ಹತ್ತು ಅಡಿ ಎತ್ತರದ 500 ಲೀಟರ್ ಜಲ ತುಂಬಿರುವ ಕಳಸಕ್ಕೆ ನಿತ್ಯ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಲಾಗುತ್ತಿದೆ. ಇನ್ನು ಜ್ಯೋತಿಷಿಗಳ ಸಲಹೆಯಂತೆ ಕಾಂಗ್ರೆಸ್ ಚಿಹ್ನೆ ಅಭಯ ಹಸ್ತದಲ್ಲಿ ಅದೃಷ್ಟ ರೇಖೆಯೊಂದನ್ನು ಸೇರ್ಪಡೆ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಈ ಹಿಂದಿನ ಕಾಂಗ್ರೆಸ್ ಚಿಹ್ನೆಯಲ್ಲಿ ಅಡ್ಡಲಾಗಿ ಮೂರು ಗೆರೆಗಳಿದ್ದು, ಅದಕ್ಕೆ ಈಗ ಲಂಬವಾಗಿ ಮತ್ತೊಂದು ಗೆರೆಯನ್ನು ಎಳೆಯಲಾಗಿದೆ. ಈ ರೀತಿ ಮಾಡಿದರೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅದೃಷ್ಟ ಬರುತ್ತದೆ ಎಂಬ ಸಲಹೆ ಮೇರೆ ಈ ರೀತಿ ಬದಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ, ಚುನಾವಣೆ ಬಂತೆಂದರೆ ಸಾಕು ರಾಜಕಾರಣಿಗಳು, ಜ್ಯೋತಿಷಿಗಳು, ಅರ್ಚಕರು ತುಂಬಾ ಬ್ಯುಸಿಯಾಗುವುದಂತೂ ಸತ್ಯ.
ಇದನ್ನೂ ಓದಿ: ಕುಮಟಾ ಕ್ಷೇತ್ರದತ್ತ ನಿವೇದಿತ್ ಆಳ್ವಾ ಚಿತ್ತ; ಕೈ ಜಾರುವ ಆತಂಕದಲ್ಲಿ ಟಿಕೆಟ್ ಆಕಾಂಕ್ಷಿಗಳು!