ಬೆಂಗಳೂರು: ಹಕ್ಕುಚ್ಯುತಿ ಮೇಲೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಲು ಸ್ಪೀಕರ್ ಅವಕಾಶ ನೀಡಿದ್ದು, ವಿಧಾನಸಭೆ ಕಲಾಪದಲ್ಲಿ ಗದ್ದಲ ಕೋಲಾಹಲ ಸೃಷ್ಟಿಗೆ ಕಾರಣವಾಯಿತು.
ಸಿದ್ದರಾಮಯ್ಯ ಮಾತಿಗೆ ಅಡ್ಡಿಪಡಿಸಿದ ಬಿಜೆಪಿ ಸದಸ್ಯರು ಕಲಾಪದಿಂದ ರಮೇಶ್ ಕುಮಾರ್ ಅವರನ್ನು ಅಮಾನತು ಮಾಡುವಂತೆ ಪಟ್ಟು ಹಿಡಿದರು. ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯಾಹ್ನದ ಕಲಾಪ ಆರಂಭಗೊಳ್ಳುತ್ತಿದ್ದಂತೆ ನನ್ನ ಮುಂದೆ ಎರಡು ಹಕ್ಕುಚ್ಯುತಿ ಪ್ರಸ್ತಾವನೆಗಳು ಬಂದಿವೆ ಎಂದ ಸ್ಪೀಕರ್, ಪ್ರಶ್ನೋತ್ತರ ಕಲಾಪಕ್ಕೂ ಮೊದಲೇ ಹಕ್ಕುಚ್ಯುತಿ ವಿಚಾರದ ಮೇಲಿನ ವಿಷಯವನ್ನು ತೆಗೆದುಕೊಂಡು ಚರ್ಚೆಗೆ ಅವಕಾಶ ನೀಡಲು ನಿರ್ಧರಿಸಿದ್ದು ಹಕ್ಕುಚ್ಯುತಿ ಮೇಲೆ ಮಾತನಾಡುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಸ್ಪೀಕರ್ ಅವಕಾಶ ಕಲ್ಪಿಸಿದರು.
ಸಿದ್ದರಾಮಯ್ಯ ಮಾತು ಆರಂಭಿಸುತ್ತಿದ್ದಂತೆ ಸಚಿವ ಸುಧಾಕರ್ ಆಕ್ಷೇಪ ವ್ಯಕ್ತಪಡಿಸಿದರು. ಸದನದಲ್ಲಿ ರಮೇಶ್ ಕುಮಾರ್ ಅಶ್ಲೀಲ ಪದ ಬಳಸಿದ್ದಾರೆ, ಅವಮಾನ ಮಾಡಿದ್ದಾರೆ, ಇದು ಇಡೀ ಸದನದ ಗೌರವದ ಪ್ರಶ್ನೆ ,ಹಾಗಾಗಿ ಮೊದಲು ನಮಗೆ ಮಾತನಾಡಲು ಅವಕಾಶ ನೀಡಿ ಎಂದು ಪಟ್ಟು ಹಿಡಿದರು, ಸಚಿವ ಸುಧಾಕರ್ ಗೆ ಸಂಪುಟ ಸಹೋದ್ಯೋಗಿಗಳಾದ ಗೋಪಾಲಯ್ಯ, ಬೈರತಿ ಬಸವರಾಜ್, ಎಸ್.ಟಿ ಸೋಮಶೇಖರ್, ಬಿ.ಸಿ ಪಾಟೀಲ್ ಸೇರಿದಂತೆ ನೂತನ ಸಚಿವರು ಸಾಥ್ ನೀಡಿದರು.ಈ ವೇಳೆ ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು, ಆರೋಪ ಪ್ರತ್ಯಾರೋಪಗಳು ಕೇಳಿಬಂದವು, ಆಗ ಮಧ್ಯಪ್ರವೇಶ ಮಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರು ಸಹಿ ಹಾಕಿದ ಪತ್ರ ಬಂದಿದೆ, ನಿಯಮಾವಳಿ 363 ಪ್ರಕಾರ ರಮೇಶ್ ಕುಮಾರ್ ವಿರುದ್ಧ ತೀವ್ರ ಶಿಕ್ಷೆ ಕೊಡಬೇಕು, ಪ್ರಸಕ್ತ ಅಧಿವೇಶನದಿಂದ ಅಮಾನತು ಮಾಡಬೇಕು ಎಂದು ಶಾಸಕರ ಸಹಿ ಇರುವ ಪತ್ರ ಕೊಟ್ಟಿದ್ದಾರೆ ಇದನ್ನು ಸದನದ ಗಮನಕ್ಕೆ ತರುತ್ತಿದ್ದೇನೆ ಎಂದರು.
ನಂತರ ಸಿದ್ದರಾಮಯ್ಯಗೆ ಮಾತನಾಡಲು ಅವಕಾಶ ನೀಡಲಾಯ್ತು. ಇದಕ್ಕೆ ಸಚಿವ ಸುಧಾಕರ್ ಸೇರಿ ನೂತನ ಸಚಿವರು ಎದ್ದು ನಿಂತು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ನೀವೆಲ್ಲಾ ಹೊಸದಾಗಿ ಸಚಿವರಾಗಿದ್ದೀರಿ ಕುಳಿತುಕೊಳ್ಳಿ, ನನ್ನನ್ನು ಕರೆದಿದ್ದಾರೆ ನಾನು ಮಾತನಾಡಲು ಬಿಡಿ ಎಂದು ಮನವಿ ಮಾಡಿದರು. ಆದರೂ ಬಿಜೆಪಿ ಸದಸ್ಯರು ಸದನದಲ್ಲಿ ಗದ್ದಲ ಮುಂದುವರೆಸಿದರು. ಈ ವೇಳೆ ಮತ್ತೆ ಮಧ್ಯಪ್ರವೇಶ ಮಾಡಿದ ಸ್ಪೀಕರ್, ಇಬ್ಬರಿಗೂ ಅವಕಾಶ ಕೊಡಲಿದ್ದೇನೆ ಸಹಕರಿಸಿ ಎಂದು ಮನವಿ ಮಾಡಿದರು. ಆದರೂ ಸುಮ್ಮನಾಗದ ಬಿಜೆಪಿ ಸದಸ್ಯರು ರಮೇಶ್ ಕುಮಾರ್ ಅಮಾನತಿಗೆ ಆಗ್ರಹಿಸಿ ಘೋಷಣೆ ಕೂಗಿದರು.
ಈ ವೇಳೆ ಸುಧಾಕರ್ ಪತ್ರ ಪ್ರಸ್ತಾಪಿಸಿದ ಸ್ಪೀಕರ್, ನಿನ್ನೆ ಮಾತಾಡಿದ್ದು ಅರ್ಧಕ್ಕೆ ನಿಂತಿದೆ ಅದನ್ನು ಮುಗಿಸಲು ಅವಕಾಶ ನೀಡಿ ಎಂದು ಸುಧಾಕರ್ ಕೇಳಿದ್ದಾರೆ ಏನು ಮಾಡಬಹುದು ಎಂದು ಸದನದ ಸಲಹೆ ಕೇಳಿದರು. ಈ ವೇಳೆ ಸಚಿವ ಜಗದೀಶ್ ಶೆಟ್ಟರ್ ಮಾತನಾಡಲು ಮುಂದಾದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಜವಾಬ್ದಾರಿ ಸರಿಯಾಗಿ ನಿರ್ವಹಿಸದೆ ಗಲಾಟೆ ಮಾಡುತ್ತಿದ್ದಾರೆ, ಸದನ ಕರೆದು ಈ ರೀತಿ ಮಾಡಿದರೆ ಹೇಗೆ, ನನಗೆ ಮಾತನಾಡಲು ಅವಕಾಶ ಕೊಟ್ಟು ಈಗ ಅವರು ಮಾತನಾಡಲು ಬಿಡುತ್ತಿದ್ದೀರಿ ಎಂದು ಶೆಟ್ಟರ್ ಮಾತಿಗೆ ಕಿಡಿ ಕಾರಿದರು. ಅವರಿಗೆ ಹೇಗೆ ಮಾತನಾಡಲು ಅವಕಾಶ ಕೊಡುತ್ತಿದ್ದೀರಿ, ಸಭಾಧ್ಯಕ್ಷರ ಮಾತಿಗೂ ಗೌರವ ಕೊಡುತ್ತಿಲ್ಲ. ಸಂವಿಧಾನಕ್ಕೆ ಗೌರವ ಕೊಡಲ್ಲ, ಪ್ರಜಾಪ್ರಭುತ್ವಕ್ಕೆ ಬೆಂಕಿ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ತಾರಕಕ್ಕೇರಿ ಸದನ ಸಹಜ ಸ್ಥಿತಿಗೆ ಬಾರದ ಹಿನ್ನೆಲೆ ಕಲಾಪ ಮುಂದೂಡಲಾಯ್ತು.