ಬೆಂಗಳೂರು : ಕಾಂಗ್ರೆಸ್‍ನ ಬಹಿಷ್ಕಾರ, ಜೆಡಿಎಸ್‍ನ ಸಭಾತ್ಯಾಗದ ನಡುವೆಯೂ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ 2.44 ಲಕ್ಷ ಕೋಟಿ ರೂ. ಬಜೆಟ್‍ಗೆ ಇಂದು ವಿಧಾನಸಭೆಯ ಅಂಗೀಕಾರ ಪಡೆದುಕೊಂಡಿದ್ದಾರೆ.
ಮಾರ್ಚ್5 ರಂದು ವಿಧಾನಸಭೆಯಲ್ಲಿ 2.37 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದ ಯಡಿಯೂರಪ್ಪ ಅವರು ಇಂದು ಅಂಗೀಕಾರಕ್ಕೆ ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸದನದಲ್ಲಿ ಹಾಜರಿರಲಿಲ್ಲ. ಕಾಂಗ್ರೆಸ್ ಪೂರ್ಣ ಪ್ರಮಾಣದ ಬಜೆಟ್‍ಗೆ ಅಂಗೀಕಾರ ಪಡೆಯುವುದು ಬೇಡ. ವಿಶ್ವಾದ್ಯಂತ ಕೊರೊನಾ ಸೋಂಕಿನ ಆತಂಕ ಕಾಡುತ್ತಿದೆ. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ನಾವು ಅಧಿವೇಶನ ನಡೆಸಿ ಚರ್ಚೆ ಮಾಡುತ್ತಾ ಕುಳಿತರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹಾಗಾಗಿ ಪೂರ್ಣ ಪ್ರಮಾಣದ ಬಜೆಟ್ ಬದಲಾಗಿ ಮೂರು ತಿಂಗಳ ಲೇಖಾನುದಾನ ಪಡೆದುಕೊಳ್ಳಲಿ. ಮುಂದಿನ ದಿನಗಳಲ್ಲಿ ಬೇಕಿದ್ದರೆ ಅಧಿವೇಶನ ಕರೆದು ಬೇಡಿಕೆಗಳ ಮೇಲೆ ಸುದೀರ್ಘ ಚರ್ಚೆ ನಡೆಸಿ ಆನಂತರ ಪೂರ್ಣ ಪ್ರಮಾಣದ ಬಜೆಟ್‍ಗೆ ಅಂಗೀಕಾರ ಪಡೆದುಕೊಳ್ಳಲಿ ಎಂದು ವಿರೋಧ ಪಕ್ಷಗಳ ನಾಯಕರು ಸಲಹೆ ನೀಡಿದ್ದರು.
ಆದರೆ ಇದಕ್ಕೆ ಸರ್ಕಾರ ಒಪ್ಪಿರಲಿಲ್ಲ. ಪೂರ್ಣ ಪ್ರಮಾಣದ ಬಜೆಟ್‍ಗೆ ಅಂಗೀಕಾರ ಪಡೆದುಕೊಳ್ಳುತ್ತೇವೆ ಎಂದು ಪಟ್ಟು ಹಿಡಿದಿತ್ತು. ಕೊನೆಗೆ ಕಾಂಗ್ರೆಸ್ ಪಕ್ಷವೇ ಒಂದು ಹೆಜ್ಜೆ ಹಿಂದೆ ಸರಿದು ಪೂರ್ಣ ಪ್ರಮಾಣದ ಬಜೆಟ್‍ಗೆ ಅಂಗೀಕಾರ ಪಡೆದುಕೊಳ್ಳಲಿ. ಆದರೆ ಇದೇ ದಿನವೇ ಎಲ್ಲಾ ಕಲಾಪಗಳನ್ನು ಪೂರ್ಣಗೊಳಿಸಿ ಅಧಿವೇಶನ ಮುಂದೂಡಿ ಎಂದು ನಿನ್ನೆ ನಡೆದ ಕಲಾಪ ಸಲಹಾ ಸಮಿತಿಯ ಸಭೆಯಲ್ಲಿ ಒತ್ತಾಯ ಮಾಡಿತ್ತು. ಆದರೆ, ಅದಕ್ಕೆ ಒಪ್ಪದ ಸರ್ಕಾರ ಇಂದು ಅಧಿವೇಶನ ನಡೆಸಿ, ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಬಳಿಕ ಬಜೆಟ್ ಅಂಗೀಕಾರ ಪಡೆದುಕೊಂಡು ಅಧಿವೇಶನ ಮುಂದೂಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಸರ್ಕಾರದ ಮೊಂಡುತನವನ್ನು ವಿರೋಧಿಸಿ ಇಂದು ಕಾಂಗ್ರೆಸ್ ಕಲಾಪದಲ್ಲಿ ಭಾಗವಹಿಸದೇ ಬಹಿಷ್ಕಾರ ಹಾಕಿತ್ತು. ಇನ್ನು ಜೆಡಿಎಸ್ ಸದಸ್ಯರು ಅಪೆಕ್ಸ್ ಬ್ಯಾಂಕ್‍ನಲ್ಲಿ ನಡೆದಿರುವ ಅವ್ಯವಹಾರವನ್ನು ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ನಿನ್ನೆ ಸ್ಪೀಕರ್ ಸಂಜೆ ವೇಳೆಗೆ ಚರ್ಚೆಗೆ ನೀಡುವುದಾಗಿ ಹೇಳಿದ್ದರು. ಇಂದು ಬೆಳಗ್ಗೆಯೂ ಜೆಡಿಎಸ್‍ನ ಹೆಚ್ .ಡಿ.ರೇವಣ್ಣ ಚರ್ಚೆಗೆ ಸಮಯ ಕೇಳಿ ಒತ್ತಡ ಹೇರಿದರು. ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿಯವರಿಂದ ಉತ್ತರ ನೀಡಿದ ಬಳಿಕ ಅಪೆಕ್ಸ್ ಬ್ಯಾಂಕ್ ವಿಷಯ ಕುರಿತು ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು. ಆದರೆ ಇಂದು ಕೂಡ ಚರ್ಚೆಗೆ ಅವಕಾಶ ಸಿಗುವುದಿಲ್ಲ ಎಂಬ ಅನುಮಾನ ವ್ಯಕ್ತ ಪಡಿಸಿದ ರೇವಣ್ಣ ಅವರು ಧರಣಿಗೆ ಮುಂದಾದರೂ. ಸ್ಪೀಕರ್ ಮನವೋಲಿಕೆ ಪ್ರಯತ್ನ ನಡೆಸುತ್ತಿದ್ದಾಗ ಅದಕ್ಕೆ ಒಪ್ಪದೇ ತಮ್ಮ ಪಕ್ಷದ ಶಾಸಕರ ಜೊತೆ ರೇವಣ್ಣ ಸಭಾತ್ಯಾಗ ಮಾಡಿದರು.
ಸದನಕ್ಕೆ ಬಂದು ಹೊರ ನಡೆದ ಕಾಂಗ್ರೆಸ್ ಸದಸ್ಯ ! :
ಕಾಂಗ್ರೆಸ್ ಬಹಿಷ್ಕಾರ ಹಾಕಿರುವುದನ್ನು ತಿಳಿಯದೇ ಕಾಂಗ್ರೆಸ್‍ನ ಶಾಸಕ ಎಂ.ವೈ.ಪಾಟೀಲ್ ಅವರು ಇಂದು ಬೆಳಗ್ಗೆ ಸದನಕ್ಕೆ ಆಗಮಿಸಿದರು. ಕಾಂಗ್ರೆಸ್‍ನ ಯಾವ ಶಾಸಕರು ಕಲಾಪದಲ್ಲಿ ಹಾಜರಿಲ್ಲದ್ದನ್ನು ಕಂಡು ತಾವು ಕೂಡ ಎದ್ದು ಹೊರ ನಡೆದರು.