ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲಿ ಯುವಕರ ಗುಂಪೊಂದು ಕೈ ಕೈ ಮಿಲಾಯಿಸಿದ ಘಟನೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜನವರಿ 15ರಂದು ಮಧ್ಯಾಹ್ನ ಕಾರು ಚಾಲಕ ಅನಿಲ್ ಎಂಬಾತನ ಮೇಲೆ ಹಲ್ಲೆ ಮಾಡಲಾಗಿದ್ದು, ಅರವಿಂದ್ ರಾಜ್ ಬಹರ್, ಅವನೀಶ್ ಕುಮಾರ್, ಚಂದನ್ ಚವಾಣ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳಾದ ಅರವಿಂದ್ ರಾಜ್ ಬಹರ್, ಅವನೀಶ್ ಕುಮಾರ್ ಮತ್ತು ಚಂದನ್ ಚವಾಣ್ ತಮ್ಮ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಯುವತಿಯೊಬ್ಬಳ ದ್ವಿಚಕ್ರ ವಾಹನಕ್ಕೆ ಅಡ್ಡಲಾಗಿ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ತನ್ನ ಕಾರಿನಲ್ಲಿ ಬಂದಿದ್ದ ಅನಿಲ್, 'ನಿಧಾನವಾಗಿ ನೋಡಿಕೊಂಡು ಹೋಗಿ' ಎಂದು ಆರೋಪಿಗಳಿಗೆ ಸೂಚಿಸಿದ್ದಾನೆ. ಈ ವೇಳೆ ಆರೋಪಿಗಳು ಹಾಗೂ ಅನಿಲ್ ನಡುವೆ ಮಾತಿಗೆ ಮಾತು ಬೆಳೆದಿದೆ. ಆರೋಪಿಗಳು ಅನಿಲ್ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಬೆಳ್ಳಂದೂರು ಪೊಲೀಸ್ ಠಾಣೆಗೆ ಅನಿಲ್ ದೂರು ನೀಡಿದ್ದಾನೆ. ಘಟನೆಯ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಕ್ಷಣ ಎಚ್ಚೆತ್ತುಕೊಂಡು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿನ ಪ್ರಕರಣ - ಮಾರಕಾಸ್ತ್ರ ಹಿಡಿದು ಮಹಿಳೆಗೆ ಬೆದರಿಕೆಯೊಡ್ಡಿದ್ದ ಆರೋಪಿಯ ಬಂಧನ: ಮದ್ಯಪಾನ ಮಾಡಿ ದಿನನಿತ್ಯ ಕಿರಿಕಿರಿಯುಂಟು ಮಾಡುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೆ ಹಾಡಹಗಲೇ ಮಾರಕಾಸ್ತ್ರ ಹಿಡಿದು ಅಕ್ಕಪಕ್ಕದ ಮನೆಯವರಿಗೆ ಬೆದರಿಕೆಯೊಡ್ಡಿದ್ದ ಆರೋಪಿಯನ್ನು ವರ್ತೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಮುತ್ತು ಮುರಳಿ (27) ಬಂಧಿತ ಆರೋಪಿ. ಮಾರಕಾಸ್ತ್ರ ಹಿಡಿದು ಆರೋಪಿ ಪಕ್ಕದ ಮನೆಯ ಮಹಿಳೆಯೊಬ್ಬರನ್ನು ಬೆದರಿಸಿದ್ದ ಘಟನೆ ಭಾನುವಾರ ಸಂಜೆ ವರ್ತೂರು ಠಾಣಾ ವ್ಯಾಪ್ತಿಯ ಪಣತ್ತೂರು ದಿಣ್ಣೆಯಲ್ಲಿ ನಡೆದಿತ್ತು.
ಮಾರತ್ತಹಳ್ಳಿ ಮತ್ತು ವರ್ತೂರು ಠಾಣೆಗಳಲ್ಲಿ ರೌಡಿ ಆಸಾಮಿಯಾಗಿರುವ ಆರೋಪಿ ಹಾಗೂ ಪಕ್ಕದ ಮನೆಯವರ ನಡುವೆ ಭಾನುವಾರ ಸಂಜೆ ಗಲಾಟೆಯಾಗಿತ್ತು. ಆರೋಪಿ ಮುತ್ತು ಮುರಳಿ ಪ್ರತಿನಿತ್ಯ ಮದ್ಯಪಾನ ಮಾಡಿ, ಗಾಂಜಾ ಸೇವಿಸಿ ನೆರೆಹೊರೆ ಜನರಿಗೆ ಕಿರುಕುಳ ನೀಡುತ್ತಿದ್ದ. ನಿನ್ನೆ ಇದೇ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ ಮಾರಕಾಸ್ತ್ರ ಹಿಡಿದು ಪಕ್ಕದ ಮನೆಯ ಮಹಿಳೆಗೆ ಅವಾಜ್ ಹಾಕಿದ್ದ. ಆರೋಪಿಯು ನಡುರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ಅಟ್ಟಹಾಸ ಪ್ರದರ್ಶಿಸಿರುವ ವಿಡಿಯೋವನ್ನು ಸ್ಥಳೀಯರು ಮೊಬೈಲ್ ಫೋನ್‌ನಲ್ಲಿ ಸೆರೆ ಹಿಡಿದಿದ್ದರು. ಈ ವಿಡಿಯೋ ಆಧರಿಸಿ ತನಿಖೆ ನಡೆಸಿದ್ದ ವರ್ತೂರು ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಹಾವೇರಿ ಅತ್ಯಾಚಾರ ಪ್ರಕರಣ: 8ನೇ ಆರೋಪಿ ಬಂಧನ; ಪಿಎಸ್ಐ, ಕಾನ್ಸ್ಟೆಬಲ್ ಅಮಾನತು