ಬೆಂಗಳೂರು: ಕಳ್ಳನನ್ನು ಹಿಡಿಯಲು ಹೋದ ಮಹದೇವಪುರ ಠಾಣೆಯ ಪೊಲೀಸ್ ಸಬ್ ಇನ್ಸ್ಪೆೆಕ್ಟರ್ ಮೇಲೆ ಲಾಂಗ್ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಆರೋಪಿ ಪರಾರಿಯಾಗಿದ್ದಾನೆ. ಕೆ.ಜಿ.ಎಫ್ ಠಾಣಾ ವ್ಯಾಪ್ತಿಯ ಸುಸೈಪಾಳ್ಯದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ.
ಅಪ್ಟೆನ್ ಹಲ್ಲೆ ಮಾಡಿದ ಆರೋಪಿ. ಮಹದೇವಪುರ ಠಾಣೆಯ ಸಬ್ ಇನ್ಸ್ಪೆಕ್ಟರ್ ಹರಿನಾಥ್ ಹಲ್ಲೆಗೊಳಗಾದವರು. ಗಂಭೀರ ಗಾಯಗೊಂಡ ಅವರು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
![Bangalore](https://etvbharatimages.akamaized.net/etvbharat/prod-images/kn-bng-03-mahadevapura-crime-7202806_04032021121456_0403f_1614840296_1078.jpg)
ಅಪ್ಟೆನ್ ಮಹದೇವಪುರ ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ವೈಟ್ ಫೀಲ್ಡ್ ವಿಭಾಗದ ಪೊಲೀಸರಿಗೆ ತಲೆನೋವಾಗಿ ಪರಿಣಾಮಿಸಿದ್ದ. ಈತನ ಪತ್ತೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ಮಹದೇವಪುರ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹರಿನಾಥ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು.
ಆರೋಪಿ ಕೆಜಿಎಫ್ ಸುತ್ತಮುತ್ತ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ನೇರವಾಗಿ ಕೆಜಿಎಫ್ಗೆ ಪ್ರಯಾಣ ಬೆಳೆಸಿದ್ದರು. ಬುಧವಾರ ರಾತ್ರಿ ಆರೋಪಿಯ ಚಲನವಲನದ ಮೇಲೆ ನಿಗಾವಹಿಸಿ ಬಂಧಿಸಲು ಹೋದ ಪಿಎಸ್ಐ ಅವರ ಬಲಗೈಗೆ ಲಾಂಗ್ನಿಂದ ಅಪ್ಟೆನ್ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಆತ್ಮರಕ್ಷಣೆಗಾಗಿ ಫೈಯರ್ ಮಾಡಿದರೂ ಆರೋಪಿ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಪಿಎಸ್ಐ ಅವರನ್ನು ಸ್ಥಳೀಯ ಪೊಲೀಸರ ನೆರವಿನಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ಮಾಹಿತಿ ನೀಡಿದ್ದಾರೆ.