ಬೆಂಗಳೂರು: 'ಸರ್ಕಾರ ಮತ್ತು ಅದರ ಏಜೆಂಟರು(ಪ್ರತಿನಿಧಿಗಳು)ನ್ನು ನೋಡಿ ಜನ ಭಯ ಪಟ್ಟಲ್ಲಿ ದೌರ್ಜನ್ಯದ ವಾತಾವರಣ ನಿರ್ಮಾಣವಿದ್ದಂತೆ', 'ಸರ್ಕಾರ ಮತ್ತು ಅದರ ಏಜೆಂಟರು (ಪ್ರತಿನಿಧಿಗಳು)ಗಳು ಜನರನ್ನು ನೋಡಿ ಭಯಪಟ್ಟಲ್ಲಿ ಅಲ್ಲಿ ಸ್ವಾತಂತ್ರ್ಯ ನೆಲೆಸಿದ್ದಂತೆ' ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಸಿವಿಲ್ ಪ್ರಕರಣದವೊಂದರಲ್ಲಿ ವಕೀಲನ ಮೇಲೆ ಪೊಲೀಸ್ ಠಾಣಾಧಿಕಾರಿಗಳು ನಡೆಸಿದ್ದ ಹಲ್ಲೆ ಮತ್ತು ಈ ಸಂಬಂಧ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಪ್ರಕರಣದಲ್ಲಿ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ, ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ಯುವ ವಕೀಲನಿಗೆ 3 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸೂಚನೆ ನೀಡಿ ಆದೇಶಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆಯ ಸಬ್ ಇನ್ಸ್ಪೆಕ್ಟರ್ ಕೆ.ಪಿ. ಸುತೇಶ್ ಅವರು ತಮ್ಮ ಮೇಲೆ ಕಾನೂನು ಬಾಹಿರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಂಗಳೂರಿನ ಬೆಳ್ತಂಗಡಿ ತಾಲ್ಲೂಕಿನ ಪುಟ್ಟಿಲಾ ಗ್ರಾಮದ ವಕೀಲ ಕುಲದೀಪ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಗುರುವಾರ ಈ ಆದೇಶ ಮಾಡಿದೆ. ವಕೀಲ ಕುಲದೀಪ್ ಮೇಲೆ ಹಲ್ಲೆ ನಡೆಸಿರುವ ಪೊಲೀಸರ ವಿರುದ್ಧ ಇಲಾಖೆ ತನಿಖೆ ನಡೆಸಬೇಕು.
ಈ ಕುರಿತಾದ ವರದಿಯನ್ನು ಒಂದು ತಿಂಗಳ ಒಳಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಕುಲದೀಪ್ ಮೇಲಿನ ದೌರ್ಜನ್ಯದ ಕುರಿತು ಪುಂಜಾಲಕಟ್ಟೆಯ ಠಾಣೆಯಲ್ಲಿ ಪಿಎಸ್‌ಐ ಸುತೇಶ್ ಮತ್ತು ಇತರರ ವಿರುದ್ಧ ದಾಖಲಾಗಿರುವ ಪ್ರಕರಣದ ಕುರಿತು ವಿಸ್ತೃತ ತನಿಖೆ ನಡೆಸಿ ಮಂಗಳೂರು ಪೊಲೀಸ್ ವರಿಷ್ಠಾಧಿಕಾರಿ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ಇದೇ ವೇಳೆ ಆದೇಶ ನೀಡಿದೆ.
ಪ್ರಕರಣ ಸಂಬಂಧ ಜನವರಿ 10 ರಂದು ನಡೆದ ವಿಚಾರಣೆ ವೇಳೆ ನ್ಯಾಯಾಲಯವು ಪೊಲೀಸರು ಸಿವಿಲ್ ದಾವೆಗಳಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದಾರೆ. ಪೊಲೀಸ್ ಮಹಾನಿರ್ದೇಶಕರ ನಿರ್ದೇಶನವು ಕಾಗದಕ್ಕೆ ಸೀಮಿತವಾಗಿದೆ. ಮುಂದೆ ಇಂಥ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ ಮಾಡಲಾಗುವುದು ಎಂದು ಪೊಲೀಸರಿಗೆ ಮೌಖಿಕವಾಗಿ ಎಚ್ಚರಿಕೆ ನೀಡಿತ್ತು. ವಕೀಲ ಕುಲದೀಪ್ ಅವರಿಗೆ ಪರಿಹಾರ ನೀಡಬೇಕು. ಪರಿಹಾರದ ಹಣವನ್ನು ಆರೋಪಿ ಪೊಲೀಸರಿಂದ ವಸೂಲಿ ಮಾಡಬೇಕು. ಕುಲದೀಪ್ ಅವರು ವಕೀಲರ ಸಂಘದಲ್ಲಿ ನೋಂದಣಿ ಮಾಡಿ 20 ದಿನಗಳಾಗಿಲ್ಲ. ಅದಾಗಲೇ ಅವರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಲಾಗಿದೆ ಎಂದು ಪೀಠವು ಬೇಸರ ವ್ಯಕ್ತಪಡಿಸಿತ್ತು.
ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅರ್ಜಿದಾರ ಕುಲದೀಪ್ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ.ಪಿ.ಹೆಗ್ಡೆ, ವಕೀಲರೊಬ್ಬರ ಮೇಲಿನ ಹಲ್ಲೆಯನ್ನು ಪರಿಗಣಿಸಿ ಪರಿಹಾರ ವಿತರಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಾಡಿದ ಪ್ರಥಮ ಆದೇಶ ಇದಾಗಿದೆ. ಪ್ರಕರಣದ ನ್ಯಾಯಾಲಯದ ಮೆಟ್ಟಿಲೇರಿದ ಒಂದು ತಿಂಗಳಲ್ಲಿ ಇತ್ಯರ್ಥವಾಗಿರುವ ನಿಟ್ಟಿನಲ್ಲಿಯೂ ಇದು ಐತಿಹಾಸಿಕ ಎಂದು ವಿವರಿಸಿದರು.
ಪ್ರಕರಣದ ಹಿನ್ನೆಲೆ ಏನು ? : ಸಿವಿಲ್ ಪ್ರಕರಣವೊಂದರ ಸಂಬಂಧ ವಕೀಲ ಕುಲದೀಪ್ ಎಂಬುವರನ್ನು ಸುಳ್ಳಿನ ಪ್ರಕರಣ ದಾಖಲಿಸಿದ್ದ ಪೊಲೀಸರು ವಕೀಲನನ್ನು ಅರೆ ಬೆತ್ತಲೆಗೊಳಿಸಿ ಜೀಪಿನಲ್ಲಿ ಎಳೆದುಕೊಂಡು ಹೋಗಿದ್ದರು. ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಕೀಲರ ಸಂಘಗ ಸದಸ್ಯರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಒತ್ತಾಯಿಸಿದ್ದರು. ಪೊಲೀಸರು ನಡೆಸಿದ್ದ ಹಲ್ಲೆ ಮತ್ತು ಪ್ರಕರಣ ರದ್ದುಕೋರಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಇನ್ನು ಮತ್ತೊಂದು ಪ್ರಕಣದಲ್ಲಿ ಸುಮಾರು 16 ವರ್ಷಗಳ ಹಿಂದೆ ಮನೆಯಲ್ಲಿ ನಡೆದಿದ್ದ ಕಳ್ಳತನದಿಂದ ಕೈ ತಪ್ಪಿದ್ದ ಫ್ರಾನ್ಸ್ ಮೇಡ್ ಪಿಸ್ತೂಲ್ ಹೈಕೋರ್ಟ್‌ನ ಆದೇಶದಿಂದ ಮತ್ತೆ ಮಾಲೀಕರ ಕೈಸೇರಿದೆ. ಪರವಾನಗಿ ಇಲ್ಲದೇ ಕಳುವಾಗಿದ್ದ ಪಿಸ್ತೂಲ್‌ನ್ನು ಹೊಂದಿದ್ದ ಆರೋಪದಲ್ಲಿ ಇಬ್ಬರು ವ್ಯಕ್ತಿಗಳಿಗೆ ಶಿಕ್ಷೆ ವಿಧಿಸಿದ್ದರೂ, ತನ್ನ ಪಿಸ್ತೂಲ್ ಹಿಂದಿರುಗಿಸದ ಕ್ರಮ ಪ್ರಶ್ನಿಸಿ ಸಕಲೇಶಪುರದ ಬಳ್ಳೂರ್‌ಪೇಟ್‌ನ ನಿವಾಸಿ ಎಚ್.ಕೆ.ಲೋಕೇಶ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ದ ನ್ಯಾಯಪೀಠ, ಪಿಸ್ತೂಲ್‌ನ್ನು ಪರವಾನಗಿ ಹೊಂದಿರುವ ಅರ್ಜಿದಾರರಿಗೆ ಹಸ್ತಾಂತರಿಸಬೇಕು ಎಂದು ಸೂಚನೆ ನೀಡಿ ಆದೇಶಿಸಿದೆ.
ಇದನ್ನೂ ಓದಿ: ದೇವರಾಜ ಅರಸು ಶಿಕ್ಷಣ ಟ್ರಸ್ಟ್ನ ಕಾರ್ಯದರ್ಶಿ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್