ಬೆಂಗಳೂರು : ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಮೇಲೆ ರೋಗಿಗಳ ಸಂಬಂಧಿಗಳು ಹಲ್ಲೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ರಕ್ಷಣೆ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ವೈದ್ಯ ಡಾ. ವಿನೋದ್ ಕುಲಕರ್ಣಿ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಹಾಗೂ ನ್ಯಾ. ಸಂಜಯ್ ಗೌಡ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ಪೀಠ, ರೋಗಿಗಳ ಸಂಬಂಧಿಗಳು ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸದಂತೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಕುರಿತು 3 ವಾರಗಳಲ್ಲಿ ರಾಜ್ಯ ಸರ್ಕಾರ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಆಗಸ್ಟ್ 19ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಖುದ್ದಾಗಿ ವಾದ ಮಂಡಿಸಿದ ಡಾ. ವಿನೋದ್ ಕುಲಕರ್ಣಿ ಅವರು, ಇತ್ತೀಚಿನ ದಿನಗಳಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಮೇಲಿನ ದಾಳಿಗಳು ಹೆಚ್ಚಾಗುತ್ತಿವೆ. ರೋಗಿಗಳು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದಾಗ ಅವರ ಸಂಬಂಧಿಕರು, ಸ್ನೇಹಿತರು ಆಸ್ಪತ್ರೆ ಸಿಬ್ಬಂದಿ ಮೇಲೆ, ವೈದ್ಯರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಇದರಿಂದಾಗಿ ವೈದ್ಯಕೀಯ ಸಿಬ್ಬಂದಿಗೆ ವೃತ್ತಿ ನಿರ್ವಹಿಸುವುದು ಕಷ್ಟವಾಗಿದೆ ಎಂದು ಪೀಠಕ್ಕೆ ವಿವರಿಸಿದರು.
ಇದನ್ನು ಓದಿ:ಶುಚಿ ಯೋಜನೆ ನಿರ್ಲಕ್ಷ್ಯ ಆರೋಪ: ಆರೋಗ್ಯ ಇಲಾಖೆ ಆಯುಕ್ತರ ಹಾಜರಿಗೆ ಹೈಕೋರ್ಟ್ ತಾಕೀತು