ಬೆಂಗಳೂರು: ಸಚಿವ ಸಂಪುಟ ರಚನೆ ಕುರಿತು ದೆಹಲಿಯಲ್ಲಿ ವರಿಷ್ಠರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸುತ್ತಿದ್ದರೆ, ಮಾಜಿ ಸಿಎಂ ಯಡಿಯೂರಪ್ಪ ನಿವಾಸದಲ್ಲಿ ಆಕಾಂಕ್ಷಿಗಳಿಂದ ಲಾಬಿ ಮುಂದುವರೆದಿದೆ. ಹಲವರು ಸಚಿವ ಸ್ಥಾನಕ್ಕಾಗಿ ಬಿಎಸ್ವೈ ಮನೆ ಬಾಗಿಲು ತಟ್ಟುತ್ತಿದ್ದಾರೆ.
ಇಂದು, ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಹಾಗೂ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ಬೆಂಬಲಿಗರ ಜೊತೆ ಆಗಮಿಸಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಸಂಪುಟದಲ್ಲಿ ಅವಕಾಶಕ್ಕೆ ಮನವಿ ಮಾಡಿದರು.
ಬಳಿಕ ಮಾತನಾಡಿದ ಶಾಸಕ ಅರಗ ಜ್ಞಾನೇಂದ್ರ, ಯಡಿಯೂರಪ್ಪನವರ ಭೇಟಿಯಲ್ಲಿ ವಿಶೇಷವೇನಿಲ್ಲ. ಬೆಂಗಳೂರಿಗೆ ಬಂದಾಗಲೆಲ್ಲಾ ಯಡಿಯೂರಪ್ಪನವರನ್ನು ಭೇಟಿ ಮಾಡುತ್ತೇನೆ. ನನ್ನನ್ನು ಸಚಿವ ಸಂಪುಟಕ್ಕೆ ಸೇರಿಸದಿರಲು ಯಾವುದೇ ಕಾರಣಗಳು ಇಲ್ಲ. ಯಡಿಯೂರಪ್ಪನವರಿಗೆ ನನ್ನ ಮೇಲೆ ಅನುಕಂಪ ಇದೆ. ನಾನು ಅವರ ಜೊತೆ ಜೊತೆಯಲ್ಲಿ ಬೆಳೆದವನು. ನನ್ನನ್ನು ಬಿಎಸ್ವೈ ಗುರುತಿಸುತ್ತಾರೆ, ಸಂಘ ಸಹ ಗುರುತಿಸುತ್ತದೆ. ಈ ಬಾರಿ ಸಚಿವನಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಓದಿ : ಜೆ.ಪಿ ನಡ್ಡಾ ಭೇಟಿಯಾಗಲಿರುವ ಸಿಎಂ ಬೊಮ್ಮಾಯಿ: ಹಿರಿಯರಿಗೆ ಕೊಕ್, ಹೊಸಬರಿಗೆ ಮಣೆ?
ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ಗೆ ಕೂಡ ಸಚಿವ ಸ್ಥಾನ ನೀಡುವಂತೆ ಒತ್ತಡ ತರಲಾಗುತ್ತಿದೆ. ಬಿಎಸ್ವೈ ಭೇಟಿ ಮಾಡಿದ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ರವಿಕುಮಾರ್ಗೆ ಸಚಿವ ಸ್ಥಾನ ಕೊಡುವ ಬಗ್ಗೆ ಯಡಿಯೂರಪ್ಪ ಜೊತೆ ಚರ್ಚೆ ನಡೆಸಿದ್ದಾರೆ.
ಬಿಎಸ್ವೈ ಭೇಟಿ ಬಳಿಕ ಮಾತನಾಡಿದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಗಂಗಾಮತಸ್ಥ ಸಮುದಾಯದಲ್ಲಿ ಮೂವರು ಎಂಎಲ್ಸಿಗಳಿದ್ದಾರೆ. ಎನ್. ರವಿಕುಮಾರ್, ಸಾಬಣ್ಣ ತಳವಾರ್, ಲಾಲಾಜಿ ಮೆಂಡನ್ ಈ ಮೂವರ ಪೈಕಿ ಇಬ್ಬರಿಗೆ ಸಚಿವ ಸ್ಥಾನ ಕೊಡಲು ಕೇಳಿದ್ದೇವೆ. ಯಡಿಯೂರಪ್ಪ ಅವರು ಸಚಿವ ಸ್ಥಾನ ಕೊಡಿಸಲಿದ್ದಾರೆ ಎನ್ನುವ ಭರವಸೆ ಇದೆ ಎಂದರು.