ಬೆಂಗಳೂರು : ಎನ್‍ಒಸಿ ಮಾಡಿಸಿ ಕೊಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಕಾಡುಗೋಡಿ ಠಾಣೆಯ ಎಎಸ್‍ಐವೊಬ್ಬರು ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಕಾಡುಗೋಡಿ ಪೊಲೀಸ್ ಠಾಣೆಯ ಎಎಸ್‍ಐ ಶ್ರೀನಿವಾಸ್ ಬಂಧಿತ ಅಧಿಕಾರಿ.
ಜಯನಗರ ನಿವಾಸಿ ಫರ್ವೀನ್ ಹಾಗೂ ವಿನಯ್ ಎಂಬುವರು ಪರಸ್ಪರ ಪ್ರೀತಿಸಿ ಕೆಲ ತಿಂಗಳ ಹಿಂದೆ ಮನೆ ಬಿಟ್ಟು ಬೇರೆ ಕಡೆ ಹೋಗಿ ಮದುವೆಯಾಗಿ ಮನೆಗೆ ಮರಳಿದ್ದರು. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಮಗಳು ನಾಪತ್ತೆಯಾಗಿದ್ದಾಳೆ ಎಂದು ಯುವತಿ ಪಾಲಕರು ದೂರು ನೀಡಿದ್ದರು.
ಇದಾದ ಬಳಿಕ ಪ್ರೇಮಿಗಳಿಬ್ಬರು ನಗರದಲ್ಲಿ ಮದುವೆ ನೋಂದಣಿ ಮಾಡಿಸಲು ಮುಂದಾಗಿದ್ದರು. ಇವರ ಮೇಲೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ನಾಪತ್ತೆ ಪ್ರಕರಣದ ಬಗ್ಗೆ ಮಾಹಿತಿ (ಎನ್‍ಒಸಿ) ನೀಡುವಂತೆ ವಿವಾಹ ನೋಂದಣಿ ಕೇಂದ್ರದಲ್ಲಿ ಕೇಳಿದ್ದರು. ಹೀಗಾಗಿ, ಪ್ರೇಮಿಗಳ ಸ್ನೇಹಿತ ಶೈಲೇಂದ್ರ ಕಾಡುಗೋಡಿ ಪೊಲೀಸ್ ಠಾಣೆಗೆ ತೆರಳಿ ಎನ್‍ಒಸಿ ನೀಡುವಂತೆ ಮನವಿ ಮಾಡಿದ್ದರು.
ಆದರೆ, ಎಎಸ್‍ಐ ಶ್ರೀನಿವಾಸ್ ಎನ್ಒಸಿ ಕೊಡಲು 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಕೊಡಲು ಇಚ್ಛಿಸದ ಶೈಲೇಂದ್ರ ಈ ಬಗ್ಗೆ ಎಸಿಬಿಗೆ ದೂರು ನೀಡಿದ್ದರು. ಇಂದು ಶೈಲೇಂದ್ರ ಅವರಿಂದ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ತಂಡದ ಅಧಿಕಾರಿಗಳು ದಾಳಿ ಮಾಡಿ ಎಎಸ್‍ಐ ಅನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಸಮುದ್ರಪಾಲಾಗುತ್ತಿದ್ದ ಇಬ್ಬರ ರಕ್ಷಣೆ : ವಿಡಿಯೋ ನೋಡಿ