ಬೆಂಗಳೂರು: ಕೊರೊನಾ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ನಿಗದಿಪಡಿಸಿರುವ ವೇತನ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರ ವಿರುದ್ಧ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಪ್ರತಿಭಟನೆ ನಡೆಸುತ್ತಿದೆ.
ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ನಿಗದಿಪಡಿಸಿದ ಮಾಸಿಕ ವೇತನ 11 ಸಾವಿರ ರೂಪಾಯಿ ಕೂಡಲೇ ನೀಡಬೇಕು ಎಂದು ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ರಾಜ್ಯ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆಶಾ ಕಾರ್ಯಕರ್ತೆಯರ ಸಂಘದ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ ಮಾತನಾಡಿ ಮಾಸಿಕ ವೇತನ 12 ಸಾವಿರ ರೂಪಾಯಿ ನಿಗದಿಪಡಿಸಬೇಕೆಂದು ಆಗ್ರಹಿಸಿ ಕಳೆದ 9 ತಿಂಗಳಿಂದ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಬಾಕಿ ಇರುವ ಪ್ರೋತ್ಸಾಹ ಧನ ಬಿಡುಗಡೆಗೆ ಸಹ ಆಗ ಬೇಕಿದೆ ಎಂದರು.
ಸಾಫ್ಟ್ ವೇರ್ ಸಮಸ್ಯೆಯಿಂದ ಎರಡರಿಂದ ಮೂರು ಸಾವಿರದಷ್ಟು ಪ್ರತಿ ತಿಂಗಳು ನಷ್ಟ ಆಗುತ್ತಿದೆ. ಈ ಸಮಸ್ಯೆ ಬಗ್ಗೆ ನಾವು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಹೀಗಿದ್ದರೂ ಸಮಸ್ಯೆ ಪರಿಹಾರ ಆಗಿಲ್ಲ. ನಾವು ದುಡಿದ ಹಣ ನಮ್ಮ ಕೈ ಸೇರುತ್ತಿಲ್ಲ. ಕಳೆದ ಬಾರಿ ನಾವು ಪ್ರತಿಭಟನೆ ನಡೆಸಿದಾಗಿ ಮೂರು ದಿನದಲ್ಲಿ ನಾವು ಸಮಸ್ಯೆ ಪರಿಹರಿಸುತ್ತೇನೆ ಎಂದು ಭರವಸೆ ನೀಡಿ 50 ದಿನ ಕಳೆದರೂ ನಮ್ಮ ಸಮಸ್ಯೆ ಸರಿಯಾಗಿಲ್ಲ. ಸುಳ್ಳು ಭರವಸೆಗಳನ್ನೇ ಸರ್ಕಾರ ನೀಡುತ್ತಾ ಬಂದಿದೆ. ಈ ಹೋರಾಟಕ್ಕೆ ಇವತ್ತು ತಡೆ ಹಾಕುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆ ಹಾಗೂ ತಾಲೂಕು ಭಾಗದಿಂದ ಬರುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಮೂಲಕ ಹೋರಾಟ ಹತ್ತಿಕ್ಕುವ ಕೆಲಸ ಸರ್ಕಾರ ಮಾಡುತ್ತಿದೆ. ಹೋರಾಟ ಮಾಡೋದು ನಮ್ಮ ಹಕ್ಕು ಅಧಿವೇಶನ ನಡೆಯುತ್ತಿದೆ ನಮ್ಮ ಬೇಡಿಕೆ ಅಧಿವೇಶದಲ್ಲಿರೋ ಶಾಸಕರು ಸಚಿವರಿಗೆ ತಲುಪಬೇಕು. ಕೊರೊನಾ ವಾರಿರ್ಯಸ್ ರೀತಿಯಲ್ಲಿ ಆಶಾ ಕಾರ್ಯಕರ್ತೆಯರು ಕೆಲಸ ನಿರ್ವಹಿಸುತ್ತಿದ್ದಾರೆ ಅವರಿಗೆ ಸರಿಯಾದ ಪ್ರೋತ್ಸಾಹ ಧನ ಸರಿಯಾದ ಸಮಯಕ್ಕೆ ಸಿಗುವಂತಾಗಬೇಕು ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು.