ಬೆಂಗಳೂರು: ಮೀಸಲಾತಿ ಹೆಚ್ಚಳ ಮಾಡದ ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದ ಜನರು ಕ್ಷಮಿಸುವುದಿಲ್ಲ ಎಂದು ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಾಗ್ದಾಳಿ ನಡೆಸಿದರು. ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಎಸ್‍ಸಿ, ಎಸ್‍ಟಿ, ಒಬಿಸಿ ಸೇರಿದಂತೆ ವಿವಿಧ ಸಮುದಾಯಕ್ಕೆ ನ್ಯಾಯ ಕೊಡುವ ಬಗ್ಗೆ ಮಾತನಾಡಿದ್ದ ಬಿಜೆಪಿ ಅದನ್ನೇ ಅನುಷ್ಠಾನಕ್ಕೆ ತಂದಿದೆ. ಹಲವು ದಶಕಗಳ ಬೇಡಿಕೆಯನ್ನು ಬಿಜೆಪಿ ಈಡೇರಿಸಿದೆ. ಎಸ್‍ಸಿ, ಎಸ್‍ಟಿ ಸಮುದಾಯಗಳ ಮೀಸಲಾತಿಯನ್ನು ಅದು ಹೆಚ್ಚಿಸಿದೆ. ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್ ಪಕ್ಷ ಅದನ್ನು ಮಾಡಿಲ್ಲವೇಕೆ?. ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷವನ್ನೂ ಕ್ಷಮಿಸುವುದಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ಬಡವರು, ಶೋಷಿತರ ಕಲ್ಯಾಣಕ್ಕಾಗಿ ಏನನ್ನೂ ಮಾಡಿಲ್ಲ. ಕಾಂಗ್ರೆಸ್ ಪಕ್ಷದವರಿಗೆ ಚುನಾವಣೆಗೆ ಸಂಬಂಧಿಸಿ ಯಾವುದೇ ವಿಚಾರಗಳಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಕಾಂಗ್ರೆಸ್ ಪಕ್ಷ ಕರ್ನಾಟಕದ ಜನತೆಗೆ ಏನು ಕೊಟ್ಟಿದ್ದಾರೆ ಎಂದು ಸವಾಲು ಹಾಕಿದರು. ಅವರು ಏನೂ ಮಾಡಲೇ ಇಲ್ಲ. ಅದಕ್ಕಾಗಿಯೇ ಅವರು ಮೌನವಾಗಿದ್ದಾರೆ. ಸಿದ್ದರಾಮಯ್ಯ ಸರಕಾರ ಇದ್ದಾಗ ಕೇವಲ ತುಷ್ಟೀಕರಣ ನಡೆಯುತ್ತಿತ್ತು. ಆಗ ಭ್ರಷ್ಟಾಚಾರ ಗರಿಷ್ಠ ಪ್ರಮಾಣದಲ್ಲಿತ್ತು. ಸಿದ್ದರಾಮಯ್ಯ ತಮ್ಮ ಸಾಧನೆಗಳನ್ನು ಜನರ ಮುಂದಿಡಬೇಕು. ಆಗ ನಾವು ಕೂಡ ನಮ್ಮ ಸಾಧನೆಗಳನ್ನು ಜನರ ಮುಂದಿಡಲು ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು.
ಮೀಸಲಾತಿ ನಿರ್ಧಾರ ಪೊಲಿಟಿಕಲ್ ಗಿಮಿಕ್ ಎಂದು ಕಾಂಗ್ರೆಸ್ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಕಾಂಗ್ರೆಸ್ ವಂಚಿತ ಸಮಾಜಗಳಿಗೆ ಏನೂ ಮಾಡಿಲ್ಲ. ಅದಕ್ಕಾಗಿ ಅವರು ಪೊಲಿಟಿಕಲ್ ಗಿಮಿಕ್ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಇತ್ತು, ಸಿದ್ದರಾಮಯ್ಯ ಸರ್ಕಾರ ಇತ್ತು ಅವರು ಯಾಕೆ ಮಾಡಲಿಲ್ಲ?. ಬಿಜೆಪಿ ಈ ಸಮಾಜಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದೆ. ಕಾಂಗ್ರೆಸ್ ಗೆ ಬೇರೆ ಯಾವುದೇ ವಿಷಯಗಳಿಲ್ಲ. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಕಾಂಗ್ರೆಸ್ ರಾಜ್ಯದ ಜನತೆಗೆ ಏನು ಮಾಡಿದೆ ಅಂತಾ ಹೇಳಲಿ. ಅವರ ಸಾಧನೆ ಏನು ಅಂತಾ ಜನರ ಮುಂದೆ ಬರಲಿ ಎಂದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಕೇವಲ ಓಲೈಕೆ ರಾಜಕಾರಣ ನಡೆಯಿತು. ಭ್ರಷ್ಟಾಚಾರ ಸಿದ್ದರಾಮಯ್ಯ ಸರ್ಕಾರದಲ್ಲಿ ತಾರಕಕ್ಕೇರಿತ್ತು. ಸಿದ್ದರಾಮಯ್ಯ ಸರ್ಕಾರದಲ್ಲಿ ಏನೇನು ಮಾಡಿದ್ದಾರೆ ಅಂತಾ ಜನರ ಮುಂದೆ ಬಂದು ಹೇಳಲು ನಾನು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕುತ್ತೇನೆ. ಅನಂತರ ನಾವು ನಮ್ಮ ಸಾಧನೆಗಳನ್ನು ಮುಂದಿಡುತ್ತೇವೆ. ನಮ್ಮ ಸರ್ಕಾರದ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಅರುಣ್ ಸಿಂಗ್ ಹೇಳಿದರು.
ರಾಜ್ಯದ ಜನರಿಗೆ ಮಾಡಿದ ಅವಮಾನ: ಸಿಎಂ ಬೊಮ್ಮಾಯಿ ಶಕುನಿ ಎಂಬ ಸುರ್ಜೇವಾಲಾ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಿಎಂ ಬೊಮ್ಮಾಯಿ ಕಾಮನ್ ಮ್ಯಾನ್, ಸಿಂಪಲ್ ಮ್ಯಾನ್. ಯಾರೂ ಕೂಡಾ ಅವರ ಬದ್ಧತೆ ಬಗ್ಗೆ ಒಂದೂ ಪ್ರಶ್ನೆಯನ್ನೂ ಎತ್ತಲು ಅವಕಾಶವಿಲ್ಲದ ವ್ಯಕ್ತಿ. ಈ ರೀತಿಯ ಅವಹೇಳನಕಾರಿ ಹೇಳಿಕೆ ಕಾಂಗ್ರೆಸ್ ನ ವರ್ತನೆ ತೋರಿಸುತ್ತದೆ. ರಾಹುಲ್ ಗಾಂಧಿ ಕೂಡಾ ಇದೇ ರೀತಿ ಮಾತಾನಾಡುತ್ತಾರೆ. ಇಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಕೂಡಾ ಅದೇ ರೀತಿಯಲ್ಲಿ ಮಾತನಾಡುತ್ತಿದ್ದಾರೆ.
ಇದೇ ಸಿದ್ದರಾಮಯ್ಯ ಎಸ್ ಟಿ ಸಮುದಾಯದ ಹಿರಿಯ ನಾಯಕ ಶ್ರೀರಾಮುಲುಗೆ ಪೆದ್ದ ಎಂದಿದ್ದರು. ಈಗ ಬೊಮ್ಮಾಯಿಗೆ ಅಪಮಾನ ಮಾಡುತ್ತಿದ್ದಾರೆ. ಸಿಎಂಗೆ ಅವಹೇಳನಕಾರಿ ಹೇಳಿಕೆ ಕರ್ನಾಟಕದ ಜನರಿಗೆ ಮಾಡುವ ಅಪಮಾನ. ಇದಕ್ಕೆ ಕರ್ನಾಟಕದ ಜನರು ಸರಿಯಾದ ಪ್ರತಿಕ್ರಿಯೆಯನ್ನು ಚುನಾವಣೆಯಲ್ಲಿ ಕೊಡುತ್ತಾರೆ ಎಂದರು.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, ಇದನ್ನು ನಮ್ಮ ಕೇಂದ್ರ ಚುನಾವಣಾ ಸಮಿತಿ ನಿರ್ಧರಿಸುತ್ತದೆ. ಮೊದಲು ರಾಜ್ಯ ಚುನಾವಣಾ ಸಮಿತಿ ಕುಳಿತು ಚರ್ಚಿಸಿ ನಂತರ ಕೇಂದ್ರಕ್ಕೆ ಕಳಿಸುತ್ತಾರೆ. ನಂತರ ಸರಿಯಾದ ಸಮಯದಲ್ಲಿ ಕೇಂದ್ರ ಚುನಾವಣಾ ಸಮಿತಿ ನಿರ್ಧಾರ ತೆಗೆದುಕೊಳ್ಳುತ್ತದೆ. ಇಂದು ರಾಜ್ಯ ಕೋರ್ ಕಮಿಟಿ ಸಭೆ ಇದೆ ಎಂದರು.
ಇದನ್ನೂ ಓದಿ: ಮೀಸಲಾತಿ ಪರಿಷ್ಕರಣೆ ಅಸಾಂವಿಧಾನಿಕ, ಕೂಡಲೇ ರಾಜ್ಯ ಸರ್ಕಾರ ವಜಾಗೊಳ್ಳಲಿ: ಸಿದ್ದರಾಮಯ್ಯ