ಬೆಂಗಳೂರು: ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಧನದಿಂದ ಬಿಜೆಪಿಗೆ ದೊಡ್ಡ ಆಘಾತವಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಮಾತನಾಡಿದ ಅವರು, ದೇಶ ಕಂಡ ಅಪರೂಪದ ಹಣಕಾಸು ಸಚಿವ ಅರುಣ್ ಜೇಟ್ಲಿ. ಅವರ ನಿಧನದಿಂದ ಪಕ್ಷಕ್ಕೆ ದೊಡ್ಡ ಆಘಾತವಾಗಿದೆ. ಜಗತ್ತೇ ಅವರ ಆಡಳಿತ ವೈಖರಿ ಮೆಚ್ಚಿತ್ತು. ಲೋಕಸಭೆಯಲ್ಲಿ ಮಾತನಾಡಲು ಅವರು ಎದ್ದು ನಿಂತಾಗ ಸದನದ ಹೊರಗಡೆ ಇದ್ದ ಸದಸ್ಯರು ಒಳಗೆ ಬಂದು ಕೂರುತ್ತಿದ್ದರು. ಪ್ರತಿಪಕ್ಷಗಳೂ ಒಪ್ಪುವ ರೀತಿ ಕೆಲಸ ಮಾಡುತ್ತಿದ್ದರು ಎಂದರು.
20 ದಿನದ ಹಿಂದೆ ಜೇಟ್ಲಿ ನನಗೆ ಆಹ್ವಾನ ನೀಡಿದ್ದರು. ಅಡ್ವೊಕೇಟ್ ಜನರಲ್ ಪುತ್ರ ವಿಜಯೇಂದ್ರ ಜೊತೆ ತೆರಳಿದ್ದೆ. 25 ನಿಮಿಷ ದೇಶ, ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ಮಾತುಕತೆ ನಡೆಸಿದ್ದೆವು. ಕರ್ನಾಟಕ ಬಿಜೆಪಿ ಬೆಳವಣಿಗೆಯಲ್ಲಿ ಅವರ ಪಾತ್ರ ದೊಡ್ಡದು. ನಾಳೆ ನಾನು ದೆಹಲಿಗೆ ತೆರಳಿ ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸ್ತೇನೆ.
ಯಾವ ರೀತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕೋ ಗೊತ್ತಾಗ್ತಿಲ್ಲ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.