ಬೆಂಗಳೂರು: 370ನೇ ವಿಧಿ ರದ್ದು ಮಾಡಿರುವ ಹಿನ್ನೆಲೆಯಲ್ಲಿ ಈ ಬಾರಿಯ ಸ್ವತಂತ್ರ್ಯ ದಿನಾಚರಣೆ ಮೇಲೆ ಉಗ್ರರ ಕರಿನೆರಳು ಬೀಳುವ ಸಾಧ್ಯತೆಯನ್ನು ಮನಗಂಡು ಬೆಂಗಳೂರಿನಲ್ಲಿ ಹೈ ಅಲರ್ಟ್ ಕಾಯ್ದುಕೊಳ್ಳಲಾಗಿದೆ.
ಮಾಣಿಕ್ ಷಾ ಪರೇಡ್ ಮೈದಾನ, ಮೆಜೆಸ್ಟಿಕ್ ರೈಲು, ಬಸ್, ಮೆಟ್ರೊ ನಿಲ್ದಾಣಗಳು ಸೇರಿದಂತೆ ಜನಸಂದಣಿ ಇರುವ ಪ್ರದೇಶಗಳಲ್ಲಿ ಸೂಕ್ತ ನಿಗಾ ವಹಿಸುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಲ್ಲಾ ಠಾಣಾ ಇನ್ ಸ್ಪೆಕ್ಟರ್ ಗಳಿಗೆ ತಾಕೀತು ಮಾಡಿದ್ದಾರೆ.
ಉಗ್ರರ ಕರಿನೆರಳು ಹಿನ್ನೆಲೆಯಲ್ಲಿ ಹೊಸದಾಗಿ ನಗರ ಹೊಟೇಲ್ ಹಾಗೂ ಲಾಡ್ಜ್ಗಳಲ್ಲಿ ಉಳಿದುಕೊಂಡಿರುವ ಗ್ರಾಹಕರ ಪೂರ್ವಾಪರ ಮಾಹಿತಿ ಕಲೆ ಹಾಕುವಂತೆ ಸೂಚನೆ ನೀಡಲಾಗಿದೆ. ವಿಧಾನಸೌಧ, ರಾಜಭವನ, ಹೈಕೋರ್ಟ್ ಸೇರಿದಂತೆ ಸರ್ಕಾರಿ ಹಾಗೂ ಪ್ರತಿಷ್ಠಿತ ಖಾಸಗಿ ಕಟ್ಟಡಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಬೆಂಗಳೂರಿಗೆ ಬರುವ ಪ್ರತಿಯೊಬ್ಬ ಪ್ರಯಾಣಿಕನನ್ನು ಆಯಾ ಕೇಂದ್ರಗಳಲ್ಲಿ ತಪಾಸಣೆ ಮಾಡಿಯೇ ಬಿಡಬೇಕು. ಅನುಮಾನಸ್ಪಾದ ವ್ಯಕ್ತಿಗಳು ಕಂಡು ಬಂದರೆ ಮುಲಾಜಿಲ್ಲದೆ ವಶಕ್ಕೆ ಪಡೆದುಕೊಳ್ಳಿ ಎಂದು ಆಯುಕ್ತರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಕೇಂದ್ರ ಬಿಂದುವಾಗಿರುವ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಮೈದಾನ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಮೈದಾನಕ್ಕೆ ಮೂವರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತರು, 11 ಡಿಸಿಪಿಗಳು, 78 ಇನ್ ಸ್ಪೆಕ್ಟರ್ ಸೇರಿದಂತೆ ಒಟ್ಟು 1,900ಕ್ಕಿಂತ ಹೆಚ್ಚು ಪೊಲೀಸರು ಭದ್ರತೆ ನೋಡಿಕೊಳ್ಳಲಿದ್ದಾರೆ. ಅದೇ ಮಾಣಿಕ್ ಷಾ ಮೈದಾನಕ್ಕೆ ಬರುವ ಅತಿಗಣ್ಯರು, ಸಾರ್ವಜನಿಕರ ವಾಹನಗಳಿಗೆ ಹಳದಿ, ಬಿಳಿ ಪಿಂಕ್, ಹಸಿರು ಬಣ್ಣದ ಪಾಸ್ಗಳನ್ನು ವಿತರಿಸಲಾಗಿದೆ.
ಸ್ವಾತಂತ್ರ್ಯ ದಿನಾಚರಣೆ ಇಂದು ರಾತ್ರಿಯೇ ಸಂಭ್ರಮ ವಾತಾವರಣ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ನಗರದ ನಿಗದಿತ ಸ್ಥಳಗಳಲ್ಲಿ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡುವಂತೆ ಸಂಚಾರಿ ಪೊಲೀಸರಿಗೆ ತಿಳಿಸಲಾಗಿದೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಕೇಂದ್ರಗಳಲ್ಲಿ ತಡರಾತ್ರಿ ನಾಕಾಬಂದಿ ಹಾಕಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.