ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದಲ್ಲಿ ಮತ್ತೆ ಅಲ್-ಉಮಾ ಸಂಘಟನೆ ಸದಸ್ಯರು ಸಕ್ರಿಯವಾಗಲು ಸಿದ್ಧತೆ ನಡೆಸಿದ್ದರು ಎಂಬ ಸ್ಫೋಟಕ ವಿಚಾರ ಬಯಲಾಗಿದ್ದು, ರಾಜ್ಯದಲ್ಲಿನ ಕೆಲ ಹಿಂದೂ ಮುಖಂಡರ ಹತ್ಯೆಗೆ ಸಿದ್ಧತೆ ನಡೆಸಿದ್ದರು ಎಂದು ಹೇಳಲಾಗಿದೆ.
ಬೆಂಗಳೂರಿನ ಕೆಲವೆಡೆ ಆಶ್ರಯ ಪಡೆದಿದ್ದ ಅಲ್-ಉಮಾ ಸಂಘಟನೆಯ ಮೂವರು ಸದಸ್ಯರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರ ಸಹಕಾರದೊಂದಿಗೆ ತಮಿಳುನಾಡಿನ ಕ್ಯು ಬ್ರ್ಯಾಂಚ್ ಮತ್ತು ಗುಪ್ತಚರ ದಳ ವಿಭಾಗದ ಅಧಿಕಾರಿಗಳು ಬಂಧಿಸಿರುವುದು ಅದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ನಗರದ ಸೋಲದೇವನಹಳ್ಳಿ ವಿವೇಕನಗರ, ಹೆಚ್‌ಎಸ್‌ಆರ್ ಲೇಔಟ್, ತಿಲಕನಗರದ ಸೇರಿ ನಾನಾ ಕಡೆಯ ಪೇಯಿಂಗ್ ಗೆಸ್ಟ್ (ಪಿಜಿ)ಗಳಲ್ಲಿ ವಾಸವಾಗಿದ್ದ ಮೊಹಮ್ಮದ್ ಹನೀಫ್ ಖಾನ್ (29),ಇಮ್ರಾನ್ ಖಾನ್ (32), ಉಸ್ಮಾನ್ ಗನಿ (24) ಎಂಬವರನ್ನು ಬಂಧಿಸಿ, ಮೂರು ಪಿಸ್ತೂಲ್ ಮತ್ತು ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಂಕಿತ ಉಗ್ರರು ತಮಿಳುನಾಡು ಮೂಲದವರು. ಇವರಲ್ಲಿ ಇಬ್ಬರು ತಮಿಳುನಾಡಿನ ಹಿಂದೂ ಮುನ್ನಾನಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಪಿ. ಸುರೇಶ್ ಕುಮಾರ್‌ರವರ ಹತ್ಯೆ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ಪಡೆದಿರುವವರು ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಕೋಮು ಸಂಘರ್ಷ ಪ್ರಕರಣಗಳಲ್ಲಿ ಭಾಗಿ ಹಾಗೂ ಬಲಪಂಥೀಯ ಧೋರಣೆ ಹೊಂದಿರುವ ಇಂದೂ ಮಕ್ಕಳ್ ಕಚ್ಚಿ(ಐಎಂಕೆ) ಪಕ್ಷದ ಇಬ್ಬರು ಮುಖಂಡರನ್ನು ಭೀಕರವಾಗಿ ಹತ್ಯೆಗೈದಿದ್ದ ಸಂಘಟನೆಯ ಆರು ಸದಸ್ಯರ ಪೈಕಿ ಮೂವರು ಕಳೆದ ಒಂದು ತಿಂಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದು, ಪ್ರಕರಣಗಳ ಮಾಸ್ಟರ್ ಮೈಂಡ್ ಖಾಜೀಂ ಮೊಯಿನ್ ಕ್ವಾಜಾ ಕೂಡ ಕೆಲ ದಿನಗಳು ಇಲ್ಲಿಯೇ ಆಶ್ರಯ ಪಡೆದು, ದೆಹಲಿಗೆ ಪರಾರಿಯಾಗಿರುವ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿಯ ಒಂದು ತಂಡವನ್ನು ದೆಹಲಿಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಮ್ಮ ಧಾರ್ಮಿಕ ವಿರೋಧಿ ಬಣಗಳ ವಿರುದ್ಧ ಕಾರ್ಯಾಚರಣೆ ನಡೆಸುವ ಉಗ್ರ ಸಂಘಟನೆ ಸದಸ್ಯರು ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ಹಿಂದೂ ಮುಖಂಡರು ಹಾಗೂ ವಿವಿಧೆಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು ಎಂದು ಹೇಳಲಾಗಿದೆ. ನಗರಕ್ಕೆ ಬರುವಾಗ ಬರಿಗೈಯಲ್ಲಿ ಬಂದಿದ್ದ ಶಂಕಿತರಿಗೆ ನಂತರ ದಿನಗಳಲ್ಲಿ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಸರಬರಾಜು ಮಾಡಲಾಗಿದೆ. ಅವುಗಳನ್ನು ತಲೆಮರೆಸಿಕೊಂಡಿರುವ ಮಾಸ್ಟರ್ ಮೈಂಡ್ ಮೊಯಿನ್ ಕ್ವಾಜಾ ತಮಿಳುನಾಡಿನಿಂದ ನಗರಕ್ಕೆ ತಂದು ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸೂಚಿಸಿದ್ದ ಎಂದು ಹೇಳಲಾಗಿದೆ. ಈ ಸಂಬಂಧ ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.