ಬೆಂಗಳೂರು: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ವೇಗವಾಗಿ ಬಂದ ಕಾರಿನಿಂದ ಕೆಸರು ಸಿಡಿದಿದ್ದಕ್ಕೆ ಆಕ್ರೋಶಗೊಂಡು ಕಾರನ್ನು ಹಿಂಬಾಲಿಸಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಆರೋಪದಡಿ ಮೂವರು ಆರೋಪಿಗಳನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ.ಹಳ್ಳಿ ನಿವಾಸಿಗಳಾದ ಅರ್ಜುನ್, ಏಪನ್ ಮತ್ತು ದೀನಾ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳೆದ ತಿಂಗಳು ಜು.25ರಂದು ಪಿಳ್ಳಣ್ಣ ಗಾರ್ಡನ್ ನಿವಾಸಿ ಸಯ್ಯದ್ ನೌಶದ್ ಹಾಗೂ ಆತನ ಕುಟುಂಬ ತನ್ನ ಅಕ್ಕನ ಮಗಳ ಮದುವೆ ಮುಗಿಸಿಕೊಂಡು ಕಾರಿನಲ್ಲಿ ಮನೆಗೆ ಹಿಂತಿರುಗುವಾಗ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಕೆಸರು ಸಿಡಿದಿದೆ. ಆ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಜಗಳ ಮುಗಿದ ಬಳಿಕ ಬಳಿಕ ಕಾರು ಹಿಂಬಾಲಿಸಿ ಮತ್ತೆ ಆರೋಪಿಯೊಬ್ಬ ಕಾರು ಅಡ್ಡಗಟ್ಟಿ, ಕಾರಿನ ಬ್ಯಾನೆಟ್ ಮೇಲೆ ಕಾಲಿಟ್ಟು ದರ್ಪ ತೋರಿದ್ದಾನೆ. ಬಳಿಕ ಸೀದಾ ಚಾಲಕನ ಬಳಿ ಹೋಗಿ ಕಾಲಿನಿಂದ ಚಾಲಕನಿಗೆ ಥಳಿಸಿ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಜೊತೆಗೆ ಇತರ ಸಹಚರರು ಕೂಡ ಇದಕ್ಕೆ ಸಾಥ್ ನೀಡಿದ್ದಾರೆ.
ದುಷ್ಕರ್ಮಿಗಳ ಹಲ್ಲೆಯಿಂದ ಕಾರು ಚಾಲಕ ನೌಶದ್, ಅವರ ತಂದೆ, ಮಾವ ಸೇರಿ ನಾಲ್ಕೈದು ಜನ ಗಾಯಗೊಂಡಿದ್ದಾರೆ. ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ ಬಗ್ಗೆ ನೌಶದ್ ಕೆ ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಘಟನೆ ಸಂಬಂಧ ಈಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.