ಬೆಂಗಳೂರು : ಖರ್ಚಿಗೆ ಕಾಸಿಲ್ಲವೆಂದು ಮೊಬೈಲ್ ಶಾಪ್ ದೋಚಿದ್ದ ಯುವಕರನ್ನು ಸಂಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪ್ರಭು (21), ಮೌಲೇಶ್ (19) ಹಾಗೂ ಅಜಯ್ (21) ಬಂಧಿತ ಆರೋಪಿಗಳು. ಬಂಧಿತರಿಂದ ಬರೋಬ್ಬರಿ 50 ಲಕ್ಷ ಮೌಲ್ಯದ ವಿವಿಧ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಎಚ್ಎಸ್ಆರ್ ಲೇಔಟ್ನ ನಿವಾಸಿಗಳಾಗಿರುವ ಆರೋಪಿಗಳು ಖಾಸಗಿ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದರು. ಆರೋಪಿಗಳ ಪೈಕಿ ಪ್ರಭು, ಇತ್ತೀಚಿಗೆ ನ್ಯೂ ಬಿಇಎಲ್ ರಸ್ತೆಯಲ್ಲಿರುವ ಗ್ಯಾಜೆಟ್ಸ್ ಕ್ಲಬ್ ಮೊಬೈಲ್ ಅಂಗಡಿಯಲ್ಲಿ ಮೊಬೈಲ್ ಖರೀದಿಸಿದ್ದ. ಅದೇ ಸಂದರ್ಭದಲ್ಲಿ ಅಂಗಡಿಯಲ್ಲಿರುವ ವಸ್ತುಗಳನ್ನು ಗಮನಿಸಿದ್ದ. ಇತ್ತ ಮನೆಯಲ್ಲಿ ಖರ್ಚಿಗೆ ಹಣ ಕೊಡುವುದಿಲ್ಲವೆಂದು ಬೇಸತ್ತಿದ್ದ ಮೂರೂ ಜನ ಕಳ್ಳತನಕ್ಕೆಂದು ಸಂಚು ರೂಪಿಸಿದ್ದರು. ಅದಕ್ಕೆಂದೇ ಬೇಕಾದ ಸಲಕರಣೆಗಳನ್ನು ಆರೋಪಿ ಪ್ರಭು ಆನ್‌ಲೈನ್‌ನಲ್ಲಿ ಬುಕ್ ಮಾಡಿ ತರಿಸಿಕೊಂಡಿದ್ದ. ಸೆಪ್ಟೆಂಬರ್ 28ರಂದು ರಾತ್ರಿ ಅಂಗಡಿಯ ಬೀಗ ಮುರಿದು ಅದರಲ್ಲಿದ್ದ ಮೊಬೈಲ್ ಫೋನ್ಸ್, ಸ್ಮಾರ್ಟ್ ವಾಚ್, ಕ್ಯಾಮರಾಗಳನ್ನು ಕದ್ದು ಪರಾರಿಯಾಗಿದ್ದರು.
ಅಂಗಡಿ ಮಾಲೀಕನ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಸಂಜಯನಗರ ಠಾಣಾ ಪೊಲೀಸರ ವಿಶೇಷ ತಂಡ ಕೃತ್ಯ ನಡೆದ 36 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 29 ಐಫೋನ್, 3 ಒನ್ ಪ್ಲಸ್, 11 ಸ್ಯಾಮ್‌ಸಂಗ್, 3 ಗೂಗಲ್ ಫೋನ್, 4 ಒಪ್ಪೋ, 2 ಐಕ್ಯೂ ಫೋನ್‌ಗಳು, ವಿವಿಧ ಕಂಪನಿಯ ಲ್ಯಾಪ್‌ಟಾಪ್‌ಗಳು, ಕ್ಯಾಮರಾಗಳು, ಸ್ಮಾರ್ಟ್ ವಾಚ್ ಮತ್ತಿತರ 50 ಲಕ್ಷ ಮೌಲ್ಯದ ಗ್ಯಾಜೆಟ್ಸ್ ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಪಶ್ಚಿಮ ವಲಯದ ಪೊಲೀಸರ ಭರ್ಜರಿ ಕಾರ್ಯಾಚರಣೆ: ಬರೋಬ್ಬರಿ 928 ಮೊಬೈಲ್ ಫೋನ್ ಜಪ್ತಿ