ಬೆಂಗಳೂರು : ಸಚಿವ ರಾಮಲಿಂಗಾ ರೆಡ್ಡಿ ಅವರ ಹೆಸರು ಬಳಸಿಕೊಂಡು ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನ ವಿಧಾನಸೌಧ ಠಾಣಾ ಪೊಲೀಸರು ಬಂಧಿಸಿದ್ದಾರೆ. ತಾನು 'ಸಚಿವರ ಆಪ್ತ, ಮುಜರಾಯಿ ಇಲಾಖೆಯಲ್ಲಿ ವರ್ಗಾವಣೆ ಮಾಡಿಸಿಕೊಡ್ತೀನಿ' ಎಂದು ಸಾಕಷ್ಟು ಜನರಿಗೆ ವಂಚಿಸಿದ್ದ ಮೈಸೂರು ಮೂಲದ ರಘು ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ.
ಎಂಬಿಎ ವ್ಯಾಸಂಗ ಮಾಡಿದ್ದ ಆರೋಪಿ, ಸುಲಲಿತವಾಗಿ ಇಂಗ್ಲಿಷ್ ಮಾತನಾಡುತ್ತಿದ್ದ, ಅಷ್ಟೇ ಅಲ್ಲ ಪಡೆದ ಶಿಕ್ಷಣ ಆಧಾರದಲ್ಲಿ ನ್ಯಾಯವಾಗಿ ಕೆಲಸ ಮಾಡುವುದನ್ನ ಬಿಟ್ಟು ಸುಲಭವಾಗಿ ಹಣ ಮಾಡಲು ಪ್ಲ್ಯಾನ್ ಮಾಡಿದ್ದ. ಈ ಹಿಂದೆ ಪ್ರಿಯಾಂಕ್ ಖರ್ಗೆ ಹೆಸರಲ್ಲಿಯೂ ಒಮ್ಮೆ ವಂಚಿಸಿ ಬಂಧನವಾಗಿದ್ದ. ಬಿಡುಗಡೆಯಾದ ಬಳಿಕ ಸಚಿವ ರಾಮಲಿಂಗಾರೆಡ್ಡಿಗೆ ತಾನು ಆಪ್ತ, ಮುಜರಾಯಿ ಇಲಾಖೆಯಲ್ಲಿ ವರ್ಗಾವಣೆ ಮಾಡಿಸಿಕೊಡುವುದಾಗಿ ಕೆಲ ಅಧಿಕಾರಿಗಳಿಗೆ ಕರೆ ಮಾಡಿದ್ದ. ವರ್ಗಾವಣೆ ಮಾಡಿಸಿಕೊಡುವುದಾಗಿ ಪೋನ್ ಪೇ, ಗೂಗಲ್ ಪೇ ಮೂಲಕ ಹಣ ಪಡೆದು ಬಳಿಕ ಅವರ ನಂಬರ್ ಬ್ಲಾಕ್ ಮಾಡುತ್ತಿದ್ದ. ಇದೇ ರೀತಿ ಸಾಕಷ್ಟು ಮಂದಿಗೆ ಕಡಿಮೆ ಪ್ರಮಾಣದಲ್ಲಿ ಹಣ ಪಡೆದು ವಂಚಿಸಿದ್ದ ಆರೋಪಿಯ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಅನ್ವಯ ಆರೋಪಿ ರಘುನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿತನಿಗೆ ರಾಮಲಿಂಗಾರೆಡ್ಡಿ ಅವರ ಸಂಪರ್ಕವೇ ಇಲ್ಲ. ಕೇವಲ ಅವರ ಹೆಸರು ಬಳಸಿರೋದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ: ಸಾರಿಗೆ ಸಚಿವರಾಗಲು ಒಪ್ಪಿದ ರಾಮಲಿಂಗರೆಡ್ಡಿ; ಡಿ.ಕೆ.ಸೋದರರ ಮನವೊಲಿಕೆ ಪ್ರಯತ್ನ ಸಫಲ
ರಾಜಕೀಯ ನಾಯಕರ ಹೆಸರಿನಲ್ಲಿ ಚಿನ್ನಾಭರಣ ಲೂಟಿ: ರಾಜಕೀಯ ನಾಯಕರಿಗೆ ಚಿನ್ನ ಬೇಕು ಎಂದು ಹೇಳಿ, ಚಿನ್ನದ ವ್ಯಾಪಾರಿಯಿಂದ 3 ಕೆಜಿ ಚಿನ್ನ ಹಾಗೂ 80 ಲಕ್ಷ ಹಣ ವಂಚನೆ ಮಾಡಿರುವ ಕುರಿತು ಸಿಟಿ ಮಾರ್ಕೆಟ್ ಪೋಲಿಸ್ ಠಾಣೆಯಲ್ಲಿ ಮೇ 5ರಂದು ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಸದ್ಯ ಈ ಪ್ರಕರಣದ ತನಿಖೆಯನ್ನು ಸಿಸಿಬಿ ಕೈಗೊಂಡಿದೆ. ವಿಶಾಲ್ ಜೈನ್ ಎಂಬ ಚಿನ್ನದ ವ್ಯಾಪಾರಿಗೆ ವಂಚಿಸಿರುವ ಆರೋಪಿಗಳಾದ ಅಭಯ್ ಜೈನ್, ಕಿರಣ್, ಸಂಕೇತ್, ನವೀನ್ ಮತ್ತು ಚರಣ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಅಭಯ್ ಜೈನ್ನನ್ನ ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದರು. ಪ್ರಸ್ತುತ ಅಭಯ್ ಜೈನ್ ಜೈಲಿನಲ್ಲಿದ್ದಾರೆ.
ವಿಶಾಲ್ ಜೈನ್ ಬಳಿ ಒಂದು ಕೆಜಿ ಚಿನ್ನ ಬೇಕು ಎಂದು ಪಡೆದಿದ್ದ ಆರೋಪಿಗಳು, ನಂತರ ಶಾಂಗ್ರೀಲಾ ಹೋಟೆಲ್ನಲ್ಲಿ ಮತ್ತೊಮ್ಮೆ ಭೇಟಿಯಾಗಿ ರಾಜಕೀಯ ನಾಯಕರ ಆಪ್ತ ಸಹಾಯಕನೊಂದಿಗೆ ಮಾತನಾಡಿದಂತೆ ನಟಿಸಿ ಮತ್ತೆ ಚಿನ್ನ ಪಡೆದಿದ್ದಾರೆ. ಇದೇ ರೀತಿ ಹಂತ ಹಂತವಾಗಿ ಒಟ್ಟು ಮೂರು ಕೆಜಿಗೂ ಅಧಿಕ ಚಿನ್ನ ಪಡೆದಿದ್ದಾರೆ. ಕೊನೆಗೆ ವಿಶಾಲ್ ಜೈನ್ ಹಣ ಕೇಳಿದಾಗ, ನಮ್ಮ ಬಳಿ 8 ಕೆಜಿ ತೂಕದ ಚಿನ್ನದ ಗಟ್ಟಿ ಇದೆ. ಅದನ್ನು ತೆಗೆದುಕೊಂಡು ಉಳಿದ ಹಣ ವಾಪಸ್ ಕೊಡಿ ಎಂದಿದ್ದಾರೆ.
ವಂಚಕರ ಮಾತು ನಂಬಿದ್ದ ವಿಶಾಲ್ ಜೈನ್ ಎಂಟು ಕೆಜಿ ತೂಕದ ಗಟ್ಟಿ ಚಿನ್ನ (ನಕಲಿ ಚಿನ್ನ) ಪಡೆದು ಐವತ್ತು ಲಕ್ಷ ಹಣ ನೀಡಿದ್ದರು. ಬಳಿಕ ಮನೆಗೆ ಬಂದು ನೋಡಿದಾಗ ಅದು ನಕಲಿ ಚಿನ್ನ ಎನ್ನುವುದು ಗೊತ್ತಾಗಿದೆ. ಆರೋಪಿಗಳ ಪ್ರಶ್ನಿಸಿದಾಗ 'ನಾವು ಕೊಟ್ಟಿರುವುದ್ದು, ಅಸಲಿ ಚಿನ್ನ ನೀವೇ ಕಬ್ಬಿಣದ ಗಟ್ಟಿ ಇಟ್ಟು, ನಾಟಕ ಮಾಡುತ್ತಿದ್ದೀರಾ? ಎಂದು ಬೆದರಿಕೆ ಹಾಕಿದ್ದರು. ಆರೋಪಿಗಳು ಒಟ್ಟು 3 ಕೆಜಿ ಚಿನ್ನದ ಆಭರಣ ಹಾಗೂ 80 ಲಕ್ಷ ಹಣ ವಸೂಲಿ ಮಾಡಿ ವಂಚನೆ ಮಾಡಿದ್ದರು. ಘಟನೆ ಸಂಬಂಧಿಸಿದಂತೆ ಕೆ.ಆರ್. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಈಗ ಈ ಪ್ರಕರಣ ತನಿಖಾ ಹಂತದಲ್ಲಿದೆ.