ಬೆಂಗಳೂರು: ಖಾಸಗಿ ಕಂಪನಿಯೊಂದು ಅಭಿವೃದ್ಧಿಪಡಿಸಿದ್ದ ಸಾಫ್ಟ್‌ವೇರ್ ಹ್ಯಾಕ್ ಮಾಡಿ, ಪೈರಸಿ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನ ದಕ್ಷಿಣ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತಿರುಚ್ಚಿ ಮೂಲದ ಇಂಜಿನಿಯರಿಂಗ್ ಪದವೀಧರ ಅರವನೀತ್ ಸಾಮಿ ಬಂಧಿತ ಆರೋಪಿ.
ಬೆಂಗಳೂರಿನ ಬನಶಂಕರಿ ಎರಡನೇ ಹಂತದಲ್ಲಿರುವ BELL - TPO ಹೆಸರಿನ ಕಂಪನಿ ಸ್ಟಾಕ್ ಮಾರ್ಕೆಟಿಂಗ್ ಸಂಬಂಧಿಸಿದ ಸಾಫ್ಟ್‌ವೇರ್ ಅಭಿವೃದ್ದಿಪಡಿಸಿ ಮಾರಾಟ ಮಾಡುತ್ತಿತ್ತು. ಆದರೆ, ಕಂಪನಿ ಮಾರಾಟ ಮಾಡಿದ್ದ ಸಾಫ್ಟ್‌ವೇರ್ ಹ್ಯಾಕ್ ಮಾಡಿ ಅದನ್ನ ಪೈರಸಿ ಮಾಡಿದ್ದ ಆರೋಪಿ ಕೇವಲ ಆರು ಸಾವಿರ ರೂಗಳಂತೆ 80 ಜನರಿಗೆ ಮಾರಾಟ ಮಾಡಿದ್ದ. ಈ ಬಗ್ಗೆ ತಮ್ಮ ಗ್ರಾಹಕರೊಬ್ಬರ ಮೂಲಕ ಮಾಹಿತಿ ತಿಳಿದ ಕಂಪನಿಯ ಕೋ-ಪ್ರಮೋಟರ್ ಚೇರ್ಮನ್ ವಿನೋದ್ ಬೆಲ್ಲಮಕೊಂಡ ದಕ್ಷಿಣ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತಿರುಚ್ಚಿಯ ತನ್ನ ಮನೆಯಲ್ಲಿದ್ದುಕೊಂಡೇ ಹ್ಯಾಕ್ ಮಾಡಿ ಸಾಫ್ಟ್‌ವೇರ್ ನಕಲು ಮಾಡಿ ಮಾರಾಟ ಮಾಡಿದ್ದ ಇಂಜಿನಿಯರಿಂಗ್ ಪದವೀಧರ ಅರವನೀತ್ ಸಾಮಿಯನ್ನ ಬಂಧಿಸಿದ್ದಾರೆ. ಸದ್ಯ ಆರೋಪಿಯ ವಿಚಾರಣೆ ಮುಂದುವರೆದಿದೆ.
ಉಂಡ ಮನೆಗೆ ಕನ್ನ ಹಾಕಿದ್ದ ಖದೀಮರ ಬಂಧನ: ಬೊಮ್ಮಸಂದ್ರ ಸಮೀಪದ ಯಾರಂಡಹಳ್ಳಿಯ ಕನ್ನಿಕಾ ನಗರದಲ್ಲಿರುವ ತಮ್ಮ ಮಾಲೀಕನ ಮನೆಯಿಂದ, 25 ಲಕ್ಷ ಹಣ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಆನೇಕಲ್ ಉಪವಿಭಾಗದ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಮಹೇಂದ್ರ ಸಿಂಗ್, ಜಗಮಲ್ ಸಿಂಗ್ ಬಂಧಿತ ಆರೋಪಿಗಳು.
ಗುಟ್ಕಾ ವ್ಯಾಪಾರಿ ಸರ್ವಣ್ ಭಾರತಿ ಎಂಬುವವರ ಬಳಿ ಕೆಲಸ ಮಾಡುತ್ತಿದ್ದ ಆರೋಪಿಗಳು, ಅವರ ಮನೆಯ ಬಾಗಿಲನ್ನೇ ಮುರಿದು 25 ಲಕ್ಷ ಹಣ ದೋಚಿ ಪರಾರಿಯಾದ್ದರು. ಗುಟ್ಕಾ ಮಾರಾಟ ಮಾಲೀಕ ಸರ್ವಣ್ಗೆ ಹಣ ಬಂದಿರುವುದರ ಮಾಹಿತಿ ತಿಳಿದಿದ್ದ ಮಹೇಂದ್ರ ಸಿಂಗ್, ತನ್ನ ಸ್ನೇಹಿತ ಜಗಮಲ್ ಸಿಂಗ್ ಜೊತೆ ಸೇರಿ ಹಣ ದೋಚಲು ಸ್ಕೇಚ್ ಹಾಕಿ, ಬರೊಬ್ಬರಿ 25 ಲಕ್ಷ ಹಣ ಕಳ್ಳತನ ಮಾಡಿದ್ದರು. ಬಳಿಕ ಜಗಮಲ್ ಸಿಂಗ್ ಆ ಹಣವನ್ನ ತೆಗೆದುಕೊಂಡು ಹೋಗಿದ್ದ.
ಅದರಂತೆಯೇ ಜು.19 ನೇ ತಾರೀಖಿನಂದು ಲೋಡ್ ಇಳಿಸಿ ಬರಲು ಹೋಗಿದ್ದ ಸರ್ವಣ್ಗೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮನೆಯಲ್ಲಿದ್ದ ಹಣ ಕಳ್ಳತನವಾಗಿರುವ ಬಗ್ಗೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಸರ್ವಣ್ ಬಳಿ ಕೆಲಸ ಮಾಡುತ್ತಿದ್ದ ಮಹೇಂದ್ರ ಸಿಂಗ್ನನ್ನು ಕರೆತಂದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆ ಕುರಿತು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಹೆಬ್ಬುಗೋಡಿ ಯಾರಂಡಹಳ್ಳಿ ಗುಟ್ಕಾ ದಾಸ್ತಾನಿನ ಮಾಲೀಕನ ಮನೆಯಲ್ಲಿ ವ್ಯವಹಾರದಿಂದ ಬಂದ ಕಲೆಕ್ಷನ್ ದುಡ್ಡು ಕಳ್ಳತನವಾಗಿತ್ತು. ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಂದ್ರ ಸಿಂಗ್ ಎಂಬಾತನ ಮೇಲೆ ಅನುಮಾನ ಮೂಡಿತ್ತು. ಬಳಿಕ ರಾಜಸ್ಥಾನ ಮೂಲದ ಆರೋಪಿ ವಶಕ್ಕೆ ಪಡೆದು ವಿಚಾರಣೆ ಮಾಡಿಸಲಾಯಿತು. ಈ ವೇಳೆ, ಆತ ನಡೆಸಿದ ಕೃತ್ಯ ಬಯಲಿಗೆ ಬಂದಿದೆ. ಚೆನ್ನೈನಲ್ಲಿರುವ ತನ್ನ ಸಂಬಂಧಿ ಜಗಮಲ್ ಸಿಂಗ ಜೊತೆಗೂಡಿ ಕಳ್ಳತನ ಮಾಡಲಾಗಿದೆ. ಇದೀಗ ಬಂಧಿತರಿಂದ 19 ಲಕ್ಷ ಹಣ ರಿಕವರಿ ಮಾಡಲಾಗಿದೆ. ಮಾಡಿದ ಸಾಲ ಹಾಗೂ ಹಾಗೂ ಧಿಡೀರ್ ಶ್ರೀಮಂತಿಕೆ ಆಸೆಯಿಂದ ಈ ಕೃತ್ಯ ಎಸಗಿದ್ದಾರೆ ಎಂದರು.
ಇದನ್ನೂ ಓದಿ: Pickpockets arrested: ಜೇಬುಗಳ್ಳತನವೇ ಇವರ ಕಸುಬು! ಒಂದೇ ಕುಟುಂಬದ ಸದಸ್ಯರೂ ಸೇರಿ ಐವರ ಬಂಧನ