ಬೆಂಗಳೂರು: ಅರ್ಧ ಬೆಲೆಗೆ ಯುಎಇ ಕರೆನ್ಸಿ ಕೊಡುವುದಾಗಿ ಕಲರ್ ಜೆರಾಕ್ಸ್ ಕಾಪಿ ಕೊಟ್ಟು ವಂಚಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದೆಹಲಿ ಮೂಲದ ಇಮ್ರಾನ್ ಶೇಕ್ ಬಂಧಿತ ಆರೋಪಿ. ಮತ್ತೋರ್ವ ಆರೋಪಿಯಾಗಿರುವ ಪಶ್ಚಿಮ ಬಂಗಾಳ ಮೂಲದ ರುಕ್ಸಾನ ಪರಾರಿಯಾಗಿದ್ದಾಳೆ.
ಉದ್ಯಮಿಗಳು ವಿದೇಶ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವವರನ್ನ ಪರಿಚಯ ಮಾಡಿಕೊಳ್ಳುತ್ತಿದ್ದ ಈ ಜೋಡಿ ''ತಮ್ಮ ಬಳಿ ಸಾಕಷ್ಟು ಯುಎಇ ಕರೆನ್ಸಿ ಇದೆ. ಆದರೆ ಎಲ್ಲವನ್ನೂ ಎಕ್ಸ್‌ಚೇಂಜ್ ಮಾಡಲು ಸಾಧ್ಯವಿಲ್ಲವಾದ್ದರಿಂದ ಮಾರಾಟ ಮಾಡಲು ನಿರ್ಧರಿಸಿದ್ದೇವೆ'' ಎನ್ನುತ್ತಿದ್ದರು. ಭಾರತೀಯ ಕರೆನ್ಸಿಯಲ್ಲಿ ಯುಎಇನ ಒಂದು ದಿರ್ಹಾಮ್ ಬೆಲೆ ಸರಿಸುಮಾರು 22 ರೂಪಾಯಿ. ಆದರೆ ತಮಗೆ 12 ರೂಪಾಯಿಯಂತೆ ಎಕ್ಸ್‌ಚೇಂಜ್ ಮಾಡಲು ಸಿದ್ಧವೆಂದು, ನಂಬಿಕೆ ಗಳಿಸಲು ಮೊದಲಿಗೆ ಒಂದು ಅಸಲಿ ದಿರ್ಹಾಮ್ ಕೊಟ್ಟು ಕಳಿಸುತ್ತಿದ್ದರು. ಹಣ ಪಡೆದವರು ಅಧಿಕೃತ ಮನಿ ಎಕ್ಸ್‌ಚೇಂಜ್ ಸೆಂಟರಿನಲ್ಲಿ ಪರಿಶೀಲಿಸಿದಾಗ ಅಸಲಿ ಎಂದು ಹೇಳುತ್ತಿದ್ದಂತೆ ಒಂದಷ್ಟು ಹಣ ಸಿದ್ಧಮಾಡಿಕೊಂಡು ಇಮ್ರಾನ್ನನ್ನು ಭೇಟಿ ಮಾಡುತ್ತಿದ್ದರು. ಹಣ ಪಡೆಯುತ್ತಿದ್ದ ಇಮ್ರಾನ್, ಕಲರ್ ಜೆರಾಕ್ಸ್ ನೋಟುಗಳನ್ನು ಆರೋಪಿಗಳ ಕೈಗಿಟ್ಟು ಎಸ್ಕೇಪ್ ಆಗುತ್ತಿದ್ದ.
ವಂಚನೆ ಪ್ರಕರಣ ಬೆನ್ನತ್ತಿದ್ದ ಸಿಸಿಬಿ ಪೊಲೀಸರು, ಆರೋಪಿ ಇಮ್ರಾನ್ ಶೇಕ್ನನ್ನು ಬಂಧಿಸಿ, ಬಂಧಿತನಿಂದ ಸುಮಾರು ನೂರಕ್ಕೂ ಹೆಚ್ಚು ನಕಲಿ ಯುಎಇ ದಿರ್ಹಾಮ್ ಅನ್ನು ವಶಕ್ಕೆ ಪಡೆದಿದ್ದಾರೆ. ಇಮ್ರಾನ್ ಜೊತೆಗಿದ್ದ ರುಕ್ಸಾನ ಮತ್ತಷ್ಟು ನಕಲಿ ಕರೆನ್ಸಿಯೊಂದಿಗೆ ಎಸ್ಕೇಪ್ ಆಗಿದ್ದು, ಆಕೆಯ ಪತ್ತೆಗೂ ಬಲೆ ಬೀಸಲಾಗಿದೆ. ಘಟನೆ ಸಂಬಂಧ ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳೆ ಪ್ರಕರಣ, ನಕಲಿ ನೋಟುಗಳ ವಶ, ಇಬ್ಬರ ಬಂಧನ: ಪಶ್ಚಿಮ ಬಂಗಾಳದ ಕೋಲ್ಕತ್ತಾ ಪೊಲೀಸ್ ಇಲಾಖೆಯ ವಿಶೇಷ ತನಿಖಾ ದಳದ ಪೊಲೀಸರು ಧರ್ಮತಾಲಾ ವೃತ್ತದಲ್ಲಿ ಜನವರಿ 30ರಂದು ರಾತ್ರಿ 10 ಲಕ್ಷ ರೂಪಾಯಿ ಮುಖಬೆಲೆಯ ನಕಲಿ ಕರೆನ್ಸಿ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ನಕಲಿ ನೋಟುಗಳನ್ನು ಸಾಗಿಸುತ್ತಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಪಕ್ಕದ ಅಸ್ಸೋಂ ರಾಜ್ಯದ ನಿವಾಸಿಗಳಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು. ಶೇಖರ್ ಅಲಿ ಹಾಗೂ ಅಬ್ದುಲ್ ರಜಾಕ್ ಖಾನ್ ಬಂಧಿತ ಆರೋಪಿಗಳು.
ಅಸ್ಸೋಂನ ಕೆಲವು ಗ್ಯಾಂಗ್‌ಗಳು ಕೋಲ್ಕತ್ತಾದಲ್ಲಿ ನಡೆಸುತ್ತಿದ್ದ ನಕಲಿ ನೋಟುಗಳ ವ್ಯವಹಾರ ಬಗ್ಗೆ ಮಾಹಿತಿ ಸಿಕ್ಕಿತ್ತು ಎಂದು ಲಾಲ್‌ಬಜಾರ್ ಮೂಲಗಳು ತಿಳಿಸಿದ್ದವು. ಅಸ್ಸೋಂನಿಂದ ನಕಲಿ ನೋಟುಗಳನ್ನು ತಂದು ಪಶ್ಚಿಮ ಬಂಗಾಳದಲ್ಲಿ ಚಲಾವಣೆ ಮಾಡುತ್ತಿದ್ದ ಗುಂಪಿನ ಕುರಿತು ಮಾಹಿತಿ ಬಂದಿತ್ತು. ಈ ಮಾಹಿತಿ ಆಧರಿಸಿ ಗುಪ್ತಚರ ವಿಭಾಗವು ಎಲ್ಲ ಪೊಲೀಸ್ ವಿಭಾಗಗಳಿಗೆ ಸಂದೇಶ ಕಳುಹಿಸಿತ್ತು. ನಕಲಿ ನೋಟಿನ ಗುಂಪಿನ ಮೇಲೆ ನಿಗಾ ಇಡಲಾಗಿತ್ತು. ತನಿಖಾ ಕಾರ್ಯಾಚರಣೆ ವೇಳೆ, ಎಸ್‌ಟಿಎಫ್‌ಗೆ ಅಸ್ಸೋಂನ ಇಬ್ಬರು ನಕಲಿ ನೋಟು ಚಲಾವಣೆಗಾರರ ಸುಳಿವು ದೊರೆತಿತ್ತು.
ಇದನ್ನೂ ಓದಿ: ಬೆಂಗಳೂರು: ಪತ್ನಿಯನ್ನೇ ಹನಿಟ್ರ್ಯಾಪ್ಗೆ ಬಿಟ್ಟ ಭೂಪ, ದಂಪತಿ ಸಹಿತ ಐವರ ಬಂಧನ