ಬೆಂಗಳೂರು : ನನಗೆ ದೊಡ್ಡ ದೊಡ್ಡವರ ಪರಿಚಯವಿದೆ. ಅವರ ಬಳಿ ಮಾತನಾಡಿ ನಿಮ್ಮ ಮಗಳಿಗೆ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಹುದ್ದೆ ಕೊಡಿಸುತ್ತೇನೆ ಎಂದು ನಂಬಿಸಿ ವ್ಯಕ್ತಿಯೋರ್ವರಿಂದ 18 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ಆರೋಪಿಯನ್ನ ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಮೂಲದ ಪುಟ್ಟರಾಜು ಎಂಬುವರು ನೀಡಿದ ದೂರಿನ ಮೇರೆಗೆ ಆರೋಪಿ ಶ್ರೀನಿವಾಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ದೇವನಹಳ್ಳಿ ಮೂಲದವನಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ. ರಾಜಕೀಯ ನಾಯಕರ ಸಂಪರ್ಕವಿದೆ ಅಂತಾ ಹೇಳಿಕೊಂಡು ಓಡಾಡುತ್ತಿದ್ದ ಎನ್ನಲಾಗಿದೆ.
ಪುಟ್ಟರಾಜು ಮಗಳು ಪಿಎಸ್ಐ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದರು. ಸಾಮಾನ್ಯ ಪ್ರವೇಶ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಪುಟ್ಟರಾಜು ಸ್ನೇಹಿತ ಕೃಷ್ಣಪ್ಪ ಎಂಬುವರಿಗೆ ಆರೋಪಿ ಶ್ರೀನಿವಾಸ್ ಸ್ನೇಹಿತನಾಗಿದ್ದ. ಶ್ರೀನಿವಾಸ್ಗೆ ರಾಜಕೀಯ ನಾಯಕರ ಪರಿಚಯವಿದೆ. ಹಣ ನೀಡಿದರೆ ನಿಮ್ಮ ಮಗಳಿಗೆ ಪಿಎಸ್ಐ ಕೆಲಸ ಸಿಗಲಿದೆ ಎಂದು ಪುಟ್ಟರಾಜುಗೆ ತಿಳಿಸಿದ್ದ.
ಮಾತುಕತೆ ಬಳಿಕ ಅಕ್ಟೋಬರ್ 2ರಂದು ಖಾಸಗಿ ಹೋಟೆಲ್ ಬಳಿ ಶ್ರೀನಿವಾಸ್ನನ್ನು ಕರೆಸಿದ್ದರು. ಈ ವೇಳೆ ಶ್ರೀನಿವಾಸ್ ನನಗೆ ದೊಡ್ಡ ದೊಡ್ಡವರ ಪರಿಚಯವಿದೆ. 70 ಲಕ್ಷ ಹಣ ನೀಡಿದರೆ ಕೆಲಸ ಕೊಡಿಸುವುದಾಗಿ ಹೇಳಿದ್ದ. ಕೆಲ ಕಾಲ ಮಾತುಕತೆಯ ನಂತರ ಪುಟ್ಟರಾಜು 55 ಲಕ್ಷ ರೂ. ನೀಡಲು ಒಪ್ಪಿದ್ದರು.
ಇದರಂತೆ ಪುಟ್ಟರಾಜು ಎರಡು ದಿನಗಳ ಬಳಿಕ ಮುಂಗಡವಾಗಿ 18 ಲಕ್ಷ ರೂಪಾಯಿ ನೀಡಿದ್ದರು. ಹಣ ಪಡೆದ ಶ್ರೀನಿವಾಸ್, ದೊಡ್ಡವರ ಜೊತೆ ಕೆಲಸದ ವಿಷಯವಾಗಿ ಮಾತನಾಡಿದ್ದೇನೆ. ಇನ್ನೊಂದು ತಿಂಗಳಲ್ಲಿ ನಿಮ್ಮ ಮಗಳಿಗೆ ನೇಮಕಾತಿ ಪತ್ರ ಸಿಗಲಿದೆ ಎಂದು ಭರವಸೆ ನೀಡಿದ್ದ.
ಕೆಲ ದಿನಗಳ ಬಳಿಕ ಪಿಎಸ್ಐ ಪರೀಕ್ಷೆ ಪಾರದರ್ಶಕವಾಗಿರಲಿದೆ. ಯಾರೋ ನಿಮಗೆ ಹಣ ಪಡೆದು ವಂಚಿಸಿದ್ದಾರೆ ಎಂದು ಸ್ನೇಹಿತರು ಎಚ್ಚರಿಸಿದ್ದರಿಂದ, ಪೊಲೀಸ್ ಠಾಣೆಗೆ ಪುಟ್ಟರಾಜು ಬಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.