ಬೆಂಗಳೂರು: ವೃದ್ಧಾಶ್ರಮಕ್ಕೆ ಸೇರಿದ ವಯೋವೃದ್ಧೆಯನ್ನು ಊಟ ನೀಡದೇ ಸತಾಯಿಸಿದ್ದಲ್ಲದೆ, ಆಕೆ ಕೊಲೆಯಾದ ಸಂಗತಿಯನ್ನು ಬಚ್ಚಿಟ್ಟು ಸಾಕ್ಷ್ಯ ನಾಶ ಮಾಡಿದ ಆರೋಪದಡಿ ವೃದ್ದಾಶ್ರಮ ಮಾಲೀಕ ಸೇರಿದಂತೆ ಐವರು ಆರೋಪಿಗಳನ್ನು ಆರ್‌ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.
ರಾಮಚಂದ್ರ ಎಂಬುವರು ದೂರು ನೀಡಿದ ಮೇರೆಗೆ ಉಸೂರು ವೃದ್ಧಾಶ್ರಮ ಮಾಲೀಕ ಯೊಗೇಶ್, ವಾರ್ಡನ್ ಭಾಸ್ಕರ್, ಜಾನ್, ಮಂಜು ಹಾಗೂ ಸಿಬ್ಬಂದಿ ಜಾನ್, ಮಂಜು ಹಾಗೂ ವಸಂತ ಎಂಬುವರನ್ನು ಬಂಧಿಸಲಾಗಿದೆ.
ಕಮಲಮ್ಮ ಹತ್ಯೆಯಾದ ದುದೈರ್ವಿ. ವಯೋ ಸಹಜವಾಗಿ ಮರೆವಿನ ಕಾಯಿಲೆ ಇದ್ದಿದ್ದರಿಂದ ಕಳೆದ ಮಾರ್ಚ್ ತಿಂಗಳಲ್ಲಿ ನಾಗರಭಾವಿಯಲ್ಲಿರುವ ಉಸೂರು ವೃದ್ಧಾಶ್ರಮಕ್ಕೆ ಸೇರಿಸಿದ್ದರು. ಪ್ರತಿ ತಿಂಗಳು 10 ಸಾವಿರ ಪಾವತಿಸುತ್ತಿದ್ದರು. ಆಗಾಗ ಆಶ್ರಮಕ್ಕೆ ಬಂದು ಹೋಗುತ್ತಿದ್ದರು.
ಕಳೆದ 20 ದಿನಗಳ ಹಿಂದೆ ಮನೆಯವರಿಗೂ ತಿಳಿಸದೇ ಗೊರಗುಂಟೆಪಾಳ್ಯದಲ್ಲಿರುವ ಆಶ್ರಮಕ್ಕೆ ಕಮಲಮ್ಮ ಅವರನ್ನು ಶಿಫ್ಟ್ ಮಾಡಲಾಗಿತ್ತು. ಬಳಿಕ ನಿಮ್ಮ ತಾಯಿಗೆ ಹುಷಾರಿಲ್ಲದ ಕಾರಣ ಮೃತ ಪಟ್ಟಿದ್ದಾರೆ ಎಂದು ಹೇಳಿ ಮಗನಿಗೆ ಆಶ್ರಮದವರು ಪೋನ್ ಮಾಡಿದ್ದಾರೆ. ಸ್ಥಳಕ್ಕೆ ಬಂದ ರಾಮಚಂದ್ರ, ತಾಯಿ ಶವ ಕಂಡಾಗ ಕಿವಿ, ತಲೆಭಾಗ ಹಾಗೂ ಕೈ ಮೇಲೆ ಗಾಯದ ಗುರುತು ನೋಡಿ ಅನುಮಾನ ವ್ಯಕ್ತಪಡಿಸಿದ್ದರು. ಈ ಸಂಬಂಧ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅಸಲಿಗೆ ಆಶ್ರಮದಲ್ಲಿ ಆಗಿದ್ದೇನು ?: ಮರೆವಿನ ಕಾಯಿಲೆಯಿಂದ ಬಳುತ್ತಿದ್ದ ಕಮಲಮ್ಮ ಆಶ್ರಮದಲ್ಲಿ ಹೆಚ್ಚಾಗಿ ಕೂಗಾಡುತ್ತಿದ್ದರಂತೆ. ಇವರನ್ನು ನಿಯಂತ್ರಣದಲ್ಲಿ ಇರಿಸಲು ಇವರ ಜೊತೆ ಗಲಾಟೆ ಮಾಡುತ್ತಿದ್ದ ಇಬ್ಬರು ಮಹಿಳೆ ಸೇರಿದಂತೆ ಮೂವರನ್ನು ಒಂದೇ ರೂಮಿನಲ್ಲಿ ಕೂಡಿ ಹಾಕಿದ್ದಾರೆ.
ಅನ್ನ - ನೀರು ಕೊಡದೇ ಒಂದು ದಿನ ಕತ್ತಲೆ ರೂಮಿನಲ್ಲಿಯೇ ಇರಿಸಲಾಗಿದೆ. ಹಸಿವಿನಿಂದ ಬಳಲುತ್ತಿದ್ದ ಕಮಲಮ್ಮ, ಮತ್ತಷ್ಟು ಜೋರಾಗಿ ಕಿರುಚಿಕೊಂಡಾಗ ಜೊತೆಯಲ್ಲಿ ಇದ್ದ ವಸಂತ ಎಂಬುವರು ಅಲ್ಲೇ ಇದ್ದ ಚೇರ್ನಿಂದ ಹೊಡೆದಿದ್ದಾರೆ. ಪರಿಣಾಮ ಈ ವೇಳೆ ರಕ್ತಸ್ರಾವವಾಗಿ ಸ್ಥಳದಲ್ಲೇ ಕಮಲಮ್ಮ ಪ್ರಾಣ ಬಿಟ್ಟಿದ್ದಾರೆ.
ಈ ವಿಚಾರ ಆಶ್ರಮದವರಿಗೆ ಗೊತ್ತಾಗುತ್ತಿದ್ದಂತೆ ಕೊಲೆಯಾಗಿರುವ ವಿಷಯ ಮರೆ ಮಾಚಲು ಶವವನ್ನು ಬಚ್ಚಿಟ್ಟಿದ್ದಾರೆ. ತನಿಖೆ ಕೈಗೊಂಡಿದ್ದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಕಮಲಮ್ಮವಿದ್ದ ಕೊಠಡಿಗೂ ಕೊಲೆಯಾದ ಸ್ಥಳಕ್ಕೂ ಹೋಲಿಕೆಯೆ ಇರಲಿಲ್ಲ. ಈ ವೇಳೆ, ಪೊಲೀಸರು ಹುಡುಕಾಟ ನಡೆಸಿದಾಗ ಡಾರ್ಕ್ ರೂಂ ಪತ್ತೆಯಾಗಿದೆ. ಅಲ್ಲಿ ರಕ್ತದ ಕಲೆ ಹಾಗೂ ಹತ್ಯೆಯಾಗಿರುವ ಕುರುಹು ಹಾಗೂ ಸಿಬ್ಬಂದಿಯ ಅನುಮಾನಾಸ್ಪದ ವರ್ತನೆ ಕಂಡು ಗುಮಾನಿ ಮೇರೆಗೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾರೆ.