ಬೆಂಗಳೂರು: ಫೋಟೋ ಶೂಟ್ ಖಯಾಲಿಗೆ ಕ್ಯಾಮರಾ ಕಳವು ಮಾಡುತ್ತಿದ್ದ ಆರೋಪಿಯನ್ನು ಕೆ.ಆರ್.ಪುರಂ ಪೊಲೀಸರು ಬಂಧಿಸಿದ್ದಾರೆ.
ಸೈಯ್ಯದ್ ಅಬೂಬಕ್ಕರ್ ಸಿದ್ದಿಕ್ ಬಂಧಿತ ಆರೋಪಿ. ಈತನಿಗೆ ಜಾಲಿ ಟ್ರಿಪ್‌ಗಳಿಗೆ ಹೋಗಿ ಫೋಟೋ ಶೂಟ್ ಮಾಡುವ ಖಯಾಲಿಯಿತ್ತು. ಹೀಗಾಗಿ ಕ್ಯಾಮರಾಗಳನ್ನು ಬಾಡಿಗೆಗೆ ಹುಡುಕುತ್ತಿದ್ದ. ಗುರುತು ಪರಿಚಯವಿಲ್ಲದ ಹಿನ್ನೆಲೆ ಈತನಿಗೆ ಯಾರೂ ಕ್ಯಾಮರಾ ಬಾಡಿಗೆಗೆ ನೀಡುತ್ತಿರಲಿಲ್ಲ. ಹೀಗಾಗಿ ಕಳೆದ ಜನವರಿ 26 ರಂದು ಕೆ.ಆರ್.ಪುರಂನ ರಾಜು ಡಿಜಿಟಲ್ ಸ್ಟುಡಿಯೋದಲ್ಲಿ ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ತೆರಳಿದ್ದಾನೆ.
ಫೋಟೋ ತೆಗೆಸಿಕೊಂಡ ನಂತರ ಸ್ಟುಡಿಯೋ ಮಾಲೀಕನನ್ನು ಟೀ ಕುಡಿಯಲು ಕರೆದೊಯ್ದು ಪರ್ಸ್ ಸ್ಟುಡಿಯೋ ಒಳಗಿದೆ, ತರುತ್ತೇನೆ ಎಂದು ಹೇಳಿ ಸ್ಟುಡಿಯೋದಲ್ಲಿದ್ದ 4 ಲಕ್ಷ ರೂ. ಬೆಲೆಬಾಳುವ ಸೋನಿ ಮಾರ್ಕ್ ಕ್ಯಾಮರಾ ಕಳವು ಮಾಡಿದ್ದಾನೆ. ಈ ಸಂಬಂಧ ಕೆ.ಆರ್.ಪುರಂ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.