ಬೆಂಗಳೂರು : ಮಾಜಿ ಕಾರ್ಪೊರೇಟರ್ ಕೊಲೆ ಪ್ರಕರಣದ ಬೆನ್ನಲ್ಲೇ ವಿವಿಧ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿದ್ದ ನಾಲ್ವರು ರೌಡಿಶೀಟರ್ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಸಿಸಿಬಿ ರೌಡಿ ನಿಗ್ರಹದಳ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ. ಚಾಮರಾಜಪೇಟೆ ರೌಡಿಶೀಟರ್ ವಿನೋದ್ ಆಲಿಯಾಸ್ ಮನ್ನಾ, ಪಾಪರೆಡ್ಡಿ, ಮನ್ಸೂರ್ ಸೇರಿದಂತೆ ಆರು ಮಂದಿ ಆರೋಪಿಗಳನ್ನು ರೌಡಿ ನಿಗ್ರಹ ದಳ ಪಶ್ಚಿಮ ವಿಭಾಗದ ಎಸಿಪಿ ಧರ್ಮೇಂದ್ರ ಹೆಡೆಮುರಿಕಟ್ಟಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ನಾಲ್ವರು ಚಾಮರಾಜಪೇಟೆ ಹಾಗೂ ಕಲಾಸಿಪಾಳ್ಯ ಪೊಲೀಸ್ ಠಾಣೆಯ ರೌಡಿಶೀಟರ್‌ಗಳಾಗಿದ್ದಾರೆ. ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲುಪಾಲಾಗಿದ್ದ ವಿನೋದ್ ಕಳೆದ ತಿಂಗಳು ಜಾಮೀನಿನ ಮೇರೆಗೆ ಹೊರಗೆ ಬಂದಿದ್ದ. ಹಣಕ್ಕಾಗಿ ಏರಿಯಾದಲ್ಲಿ ಅಪರಾಧ ಕೃತ್ಯ ನಡೆಸಲು ಸಂಚು ರೂಪಿಸಿದ್ದರು.
ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರು ಮಂದಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ರೇಖಾ ಕದಿರೇಶ್ ಕೊಲೆ ಬೆನ್ನಲ್ಲೇ ಸಿಸಿಬಿ ಪೊಲೀಸರು ಮತ್ತಷ್ಟು ಚುರುಕಾಗಿದ್ದಾರೆ. ರೌಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ರೌಡಿಗಳ ಚಲನವಲನಗಳ ಪರಿಶೀಲನೆ ನಡೆಸಲಾಗುತ್ತಿದೆ.
ಏರಿಯಾದಲ್ಲಿ ಆ್ಯಕ್ಟೀವ್ ಆಗಿರುವ ರೌಡಿಗಳಿಗೆ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳದಂತೆ ಖಡಕ್ ವಾರ್ನಿಂಗ್ ಮಾಡಿದ್ದಾರೆ. ಸುಲಿಗೆ, ಹಲ್ಲೆ, ಮೀಟರ್ ಬಡ್ಡಿ ದಂಧೆ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಓದಿ: ಕೃಷ್ಣಾ ನದಿ ಪಾಲಾದ ನಾಲ್ವರು ಸಹೋದರರು: ಶೋಧ ಕಾರ್ಯಕ್ಕೆ ಸ್ಕೂಬಾ ಡೈವಿಂಗ್ ತಂಡ ಸಾಥ್