ಬೆಂಗಳೂರು : ಮಹಾರಾಷ್ಟ್ರ ಸಚಿವರು ಕರ್ನಾಟಕ ಪ್ರವೇಶಿಸಿದರೆ ಕೂಡಲೇ ಬಂಧಿಸಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಗಡಿಯಲ್ಲಿ ಈಗ ಪರಿಸ್ಥಿತಿ ಬಿಗಡಾಯಿಸಿದೆ. ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ ಹಾಗೂ ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಅಧ್ಯಕ್ಷ, ಸಂಸದ ಶಂಭುರಾಜ್ ದೇಸಾಯಿ, ಈ ಸಮಯದಲ್ಲಿ ಬೆಳಗಾವಿಗೆ ಬಂದರೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬರಲಿದೆ ಎಂದು ವಾಟಾಳ್ ಹೇಳಿದ್ದಾರೆ.
ಸಚಿವರ ಪ್ರವೇಶದಿಂದ ಪರಿಸ್ಥಿತಿ ಬಿಗಡಾಯಿಸಲಿರುವ ಹಿನ್ನೆಲೆಯಲ್ಲಿ ಸರ್ಕಾರ ಎತ್ತೆಚ್ಚುಕೊಂಡು ಸಚಿವರ ಬಂಧನಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಬೆಳಗಾವಿ ನಮ್ಮದು, ಕರ್ನಾಟಕದ ಒಂದಿಂಚು ಜಾಗವನ್ನೂ ನಾವು ಬಿಡುವುದಿಲ್ಲ. ಗಡಿಗಳನ್ನು ಬಂದ್ ಮಾಡಿ ಮಹಾರಾಷ್ಟ್ರದವರನ್ನು ಒಳಗೆ ಬರಲು ಬಿಡುವುದಿಲ್ಲ ಎಂದು ಎಂಇಎಸ್ ಸಂಘಟನೆ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕನ್ನಡಿಗರ ಸ್ವಾಭಿಮಾನವನ್ನು ಕೆಣಕಲಾಗುತ್ತಿದೆ. ನಾಡು, ನುಡಿ, ನೆಲ ಜಲ ಕಾಪಾಡೋದು ನಮ್ಮೆಲ್ಲರ ಹೊಣೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ಪದೇ ಪದೆ ಎಂಇಎಸ್ ಖ್ಯಾತೆ ತೆಗೆಯುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ರೀತಿಯ ವ್ಯಕ್ತಿಗಳು ರಾಜಕೀಯಕ್ಕೆ ಶೋಭೆಯಲ್ಲ. ಆತ ಸಿಎಂ ಆಗೋದಕ್ಕೆ ನಾಲಾಯಕ್ ಎಂದು ಕಿಡಿಕಾರಿದರು.
ಇದನ್ನೂ ಓದಿ: ಶಿವಮೊಗ್ಗ ಪ್ರಕರಣ ಕುರಿತು ಸಿಬಿಐ ತನಿಖೆಯಾಗಬೇಕು : ವಾಟಾಳ್ ನಾಗರಾಜ್ ಆಗ್ರಹ