ಬೆಂಗಳೂರು: ಉತ್ತರಾಖಂಡದಲ್ಲಿ ಹಿಮಪಾತವಾಗಿ ಬಹಳಷ್ಟು ಜನ ಅಸುನೀಗಿದ್ದಾರೆ. ಅದರಲ್ಲಿ ಕರ್ನಾಟಕದ ವಿಕ್ರಮ್, ರಕ್ಷಿತ್ ಇಬ್ಬರು ಸಹ ಮೃತಪಟ್ಟಿದ್ದಾರೆ. ಅವರ ಮೃತದೇಹಗಳನ್ನು ಸರ್ಕಾರದ ವೆಚ್ಚದಲ್ಲಿ ರಾಜ್ಯಕ್ಕೆ ತರಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉತ್ತರಾಖಂಡದಲ್ಲಿ ನೆಹರು ಇನ್ಸಿಟ್ಯೂಟ್ ಆಫ್ ಮೌಂಟೇನಿಯರಿಂಗ್ (NIM) ನಲ್ಲಿ ಅಡ್ವಾನ್ಸ್ ಮೌಂಟೇನಿಯರಿಂಗ್ ಕೋರ್ಸ್ ಬ್ಯಾಚ್-217, ಸೆಪ್ಟೆಂಬರ್ 21 ರಿಂದ ಪ್ರಾರಂಭವಾಗಿತ್ತು. ಅಕ್ಟೋಬರ್ 4 ರಂದು ತರಬೇತಿ ವೇಳಾಪಟ್ಟಿಯಂತೆ, ಪ್ರಶಿಕ್ಷಣಾರ್ಥಿಗಳು ಮತ್ತು ಬೋಧಕರು ಪರ್ವತದಿಂದ ಹಿಂತಿರುಗುವಾಗ ಬೆಳಗ್ಗೆ 04.00 ಗಂಟೆಗೆ ದೌಪದಿ ಕಾ ದಂಡ (17000 ಅಡಿ) ಪರ್ವತಕ್ಕೆ ನ್ಯಾವಿಗೇಷನ್ಗೆ ತೆರಳಿದರು.
ಅಲ್ಲಿ ಹಿಮಕುಸಿತ ಉಂಟಾಗಿತ್ತು. ಶಿಬಿರ-1 ರ ನಲ್ಲಿ 34 ಪ್ರಶಿಕ್ಷಣಾರ್ಥಿಗಳು ಮತ್ತು ಪರ್ವತಾರೋಹಣ ಬೋಧಕರು ಬೆಳಗ್ಗೆ 8.45 ಗಂಟೆಗೆ ಹಿಮಪಾತದಲ್ಲಿ ಸಿಕ್ಕಿಬಿದ್ದರು. ಸಿಕ್ಕಿಬಿದ್ದಿರುವ ಪ್ರಶಿಕ್ಷಣಾರ್ಥಿಗಳಲ್ಲಿ ಬೆಂಗಳೂರು ನಗರ ಜಿಲ್ಲೆಯ ವಿಕ್ರಮ್ ಎಂ ಮತ್ತು ರಕ್ಷಿತ್ ಮೃತಪಟ್ಟಿದ್ದಾರೆ.12 ಬೋಧಕರು ಮತ್ತು ಪ್ರಶಿಕ್ಷಣಾರ್ಥಿಗಳನ್ನು ರಕ್ಷಿಸಲಾಗಿದೆ ಎಂದರು.
ಸಂತಾಪ ಸೂಚಿಸಿದ ಸಚಿವರು: ಉತ್ತರಾಖಂಡದಲ್ಲಿ ಹಿಮಪಾತವಾಗಿ ಬಹಳಷ್ಟು ಜನರು ಅಸುನೀಗಿದ್ದಾರೆ. ವಿಕ್ರಮ್ ಹಾಗೂ ರಕ್ಷಿತ್ ಮೃತದೇಹಗಳು ಸಿಕ್ಕಿದೆ. ಡಿಸಾಸ್ಟರ್ ಮ್ಯಾನೇಜ್ಮೆಂಟ್ ನವರಿಗೆ ಎಲ್ಲ ರೀತಿಯ ನೆರವು ನೀಡಲು ಸೂಚನೆ ನೀಡಿದ್ದೇನೆ. ಬೆಂಗಳೂರಿಗೆ ತರುವ ವ್ಯವಸ್ಥೆ ಮಾಡಲಾಗಿದೆ. ಇಂದು ವಿಮಾನದ ಮೂಲಕ ರಕ್ಷಿತ್ ಮೃತದೇಹ ಬರಲಿದೆ. ವಿಕ್ರಮ್ ಮೃತದೇಹ ರಾತ್ರಿ 9.15ಕ್ಕೆ ಬೆಂಗಳೂರು ಏರ್ ಪೋರ್ಟ್ ಗೆ ಬರಲಿದೆ. ಅದರ ಪೂರ್ಣ ವೆಚ್ಚ ಸರ್ಕಾರವೇ ಭರಿಸಲಿದೆ. ಇಬ್ಬರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಸರ್ಕಾರಕ್ಕೆ ಎಲ್ಲರೂ ಒಂದೇ: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಅಶೋಕ್, ಬಡವ, ಮಧ್ಯಮ, ಸಾಹುಕಾರ ಅನ್ನುವ ಪ್ರಶ್ನೆ ಇಲ್ಲ. ರಾಜಕಾಲುವೆ ಒತ್ತುವರಿ ಮಾಡಿರುವವರನ್ನು ಸಮಾನವಾಗಿ ನೋಡಬೇಕು. ಹಾಗೆಯೇ ನೋಡುತ್ತೇವೆ. ಸರ್ಕಾರಕ್ಕೆ ಎಲ್ಲರೂ ಕೂಡ ಒಂದೇ. ಎಲ್ಲವನ್ನೂ ಸಮಾನವಾಗಿ ನೋಡಿ, ಒತ್ತುವರಿ ತೆರವು ಮಾಡಲು ಸೂಚಿಸಿದ್ದೇನೆ.
ನ್ಯಾಯಯುತವಾಗಿ ಕಾರ್ಯಾಚರಣೆ: ಸುಮಾರು150-200 ಜನರ ಒತ್ತುವರಿಯಿಂದ ಸಾವಿರಾರು ಜನರಿಗೆ ಸಮಸ್ಯೆ ಆಗಿದೆ. ಕೆಲವರು ಕೋರ್ಟ್ ಗೆ ಹೋಗಿದ್ದಾರೆ. ನ್ಯಾಯಾಲಯಕ್ಕೂ ಮನವರಿಕೆ ಮಾಡಿ ಆದೇಶ ಪಡೆದು ತೆರವು ಮಾಡುತ್ತೇವೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ತಪ್ಪು ಯಾರು ಮಾಡಿದರೂ ತಪ್ಪೇ. ಸರ್ಕಾರ ನ್ಯಾಯಯುತವಾಗಿ ಕಾರ್ಯಾಚರಣೆ ನಡೆಸುತ್ತದೆ. ತ್ವರಿತವಾಗಿ ಸರ್ವೇ ಕಾರ್ಯವೂ ನಡೆಯುತ್ತಿದೆ. ಮುಂದೆ ಮಳೆ ಬಂದರೆ ಯಾರಿಗೂ ಸಮಸ್ಯೆ ಆಗಬಾರದು ಎನ್ನುವುದು ನಮ್ಮ ಉದ್ದೇಶ ಎಂದು ಹೇಳಿದರು.
ಎಲ್ಲ ಜಾತಿಯವರಿಂದಲೂ ಬೇಡಿಕೆ: ಒಕ್ಕಲಿಗ ಸಮುದಾಯದಿಂದ ಶೇ 10ರಷ್ಟು ಮೀಸಲಾತಿ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎಲ್ಲ ಜಾತಿಯವರು ಕೂಡ ಬೇಡಿಕೆ ಇಟ್ಟಿದ್ದಾರೆ. ಎಲ್ಲರ ಮನವಿಯನ್ನೂ ಗೌರವಯುತವಾಗಿ ತೆಗೆದುಕೊಂಡಿದ್ದೇವೆ. ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ನಾನು ಒಂದು ಸಮುದಾಯದ ನಾಯಕ ಅಲ್ಲ: ಎಸ್ ಸಿ ಮತ್ತು ಎಸ್ ಟಿ ಸಮುದಾಯಗಳು ಈಗ ಅಲ್ಲ ಬಹಳ ವರ್ಷಗಳಿಂದ ಬೇಡಿಕೆ ಇತ್ತು. ಕಮಿಟಿ ಮಾಡಲಾಗಿತ್ತು. ಅದರ ಪ್ರಕಾರ ಕೊಡಲಾಗಿದೆ. ಲಿಂಗಾಯತರು, ಒಕ್ಕಲಿಗರು, ಈಡಿಗರು ಎಲ್ಲರೂ ಮೀಸಲಾತಿ ಹೆಚ್ಚಳಕ್ಕೆ ಮನವಿ ಕೊಟ್ಟಿದ್ದಾರೆ. ಅವರ ಬೇಡಿಕೆಗಳ ಬಗ್ಗೆ ಪರಿಶೀಲನೆ ಮಾಡಿ ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ.
ನಾನೀಗ ಒಂದು ಜಾತಿ ಸಮುದಾಯದ ನಾಯಕ ಅಲ್ಲ. ಕಂದಾಯ ಸಚಿವ, ಎಲ್ಲ ಸಮುದಾಯವನ್ನ ಒಂದೇ ರೀತಿ ನೋಡಬೇಕು. ಸಿಎಂ ಬಸವರಾಜ ಬೊಮ್ಮಾಯಿ ಅವರು ಲಿಂಗಾಯತ ಸಮುದಾಯದವರು. ಆದರೂ ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿದ್ದಾರೆ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ ಇನ್ನು ನೂರು ಟ್ರೈನ್ಗೆ ಟಿಪ್ಪು, ಲಾಡೆನ್, ಘಜನಿ ಹೆಸರಿಟ್ಟು ಓಡಿಸಲಿ: ಸಚಿವ ಅಶೋಕ್
ಬಿಜೆಪಿ ರಾಜ್ಯ ಪ್ರವಾಸ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಈಗಾಗಲೇ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕರೆ ಮಾಡಿದ್ರು. ಎಲ್ಲೆಲ್ಲಿ ಹೋಗಬೇಕೆಂಬುದರ ಬಗ್ಗೆ ಲಿಸ್ಟ್ ಮಾಡಿದ್ದೇವೆ. ಸಾಧ್ಯವಾಗುವ ಕಡೆ ಹೋಗಲು ಪಟ್ಟಿ ಮಾಡಲಾಗಿದೆ. ನಾನೂ ಕೂಡ ಕೆಲವು ಕಡೆ ಪ್ರವಾಸ ಮಾಡಲಿದ್ದೇನೆ ಎಂದು ತಿಳಿಸಿದರು.