ಬೆಂಗಳೂರು : ಖಾಸಗಿ ಆಸ್ಪತ್ರೆಗಳೇ ಸರ್ಕಾರವನ್ನು ನಿಯಂತ್ರಣ ಮಾಡುತ್ತಿದೆಯಾ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ನಿಯಮ 69ರಡಿ ಕೋವಿಡ್-19 ಚರ್ಚೆ ವೇಳೆ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳ ವಿರುದ್ಧ ಕಿಡಿ ಕಾರಿದರು. ಖಾಸಗಿ ಆಸ್ಪತ್ರೆಗಳು ಸರ್ಕಾರದ ಹಿಡಿತದಲ್ಲಿ ಇವೆಯಾ?. ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ಚಿಕಿತ್ಸೆ ಸಾಧ್ಯವೇ?. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಚಿಕಿತ್ಸೆ ದರ ಇದೆ. ದುಬಾರಿ ಚಿಕಿತ್ಸೆಯಿಂದ ಎಷ್ಟೋ ಬಡವರು ಮನೆ, ಜಮೀನು ಮಾರಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭ್ರಷ್ಟಾಚಾರದ ಬಗ್ಗೆ ನಾವು ಮಾತಾಡಲ್ಲ. ಒಂದು ರಾಷ್ಟ್ರೀಯ ಪಕ್ಷ ಈಗಾಗಲೇ ಭ್ರಷ್ಟಾಚಾರದ ಬಗ್ಗೆ ಮಾತನಾಡ್ತಿದೆ. ಜೆಡಿಎಸ್-ಕಾಂಗ್ರೆಸ್ ಸರ್ಕಾರದ ವೇಳೆ ಮಾಡಿದ್ದ ಕಾಮಗಾರಿ ತಡೆ ಹಿಡಿದಿದ್ದಾರೆ. ಇಂದು ಕಾಮಗಾರಿ ಪೂರ್ಣ ಮಾಡಲು ಸರ್ಕಾರ ಅವಕಾಶ ಕೊಟ್ಟಿಲ್ಲ. ಕೆಲವರು ಪ್ರಭಾವ ಬಳಸಿ ಕಾಮಗಾರಿ ಮಾಡಿಕೊಳ್ಳಬಹುದು. ಕ್ಷೇತ್ರಗಳಲ್ಲಿ ಶಾಸಕರ ಪರಿಹಾರ ನಿಧಿ ಹಣವನ್ನು ಕೂಡ ಕೊಟ್ಟಿಲ್ಲ. ಎರಡು ವರ್ಷಗಳಿಂದ ಅದನ್ನು ತಡೆ ಹಿಡಿದಿದ್ದಾರೆ. ನಾಳೆ ನಿಮ್ಮ ಮಕ್ಕಳಿಗೆ ಒಳ್ಳೆಯದು ಆಗಲ್ಲ. ನಾವು ಕ್ಷೇತ್ರಕ್ಕೆ ಹಣ ಕೊಟ್ಟಿಲ್ಲಾ ಅಂದ್ರೆ ಜನ ಏನ್ ಮಾಡ್ತಾರೆ ಎಂದು ಕಿಡಿ ಕಾರಿದರು.
ಹಾಸನಕ್ಕೆ ಸರ್ಕಾರದಿಂದ ಕೊಡುವ ಫುಡ್ ಕಿಟ್ ಕೊಟ್ಟಿಲ್ಲ. ಹಾಸನ ಅಂದರೆ ನೀವು ಯಾಕೆ ಹೀಗೆ ಮಾಡ್ತೀರಾ?. ಭ್ರಷ್ಟಾಚಾರದ ಬಗ್ಗೆ ಬೇಕಿದ್ರೆ ನಾನು ಮಾತಾಡ್ತೇನೆ. ಭ್ರಷ್ಟಾಚಾರದ ಬಗ್ಗೆ ಮಾತನಾಡೋಕೆ ಇದು ಒಳ್ಳೆಯ ಸಂದರ್ಭ. ಆದರೆ, ಅದು ನನಗೆ ಬೇಕಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಒತ್ತು ಕೊಡಿ. ಮಕ್ಕಳಿಗೆ ಮೂಲಸೌಕರ್ಯ ಕಲ್ಪಿಸಿ ಎಂದು ಆಗ್ರಹಿಸಿದರು.
ದ್ವೇಷದ ರಾಜಕಾರಣ ಮಾಡಿದ್ರೆ ದೇವರೇ ಒಂದು ದಿನ ಶಿಕ್ಷೆ ಕೊಡುವ ಸಂದರ್ಭ ಬರುತ್ತದೆ. ಕೋವಿಡ್ಗಾಗಿ ಲಕ್ಷಾಂತರ ಖರ್ಚು ಮಾಡಿರುವ ರೈತರಿಗೆ ಪರಿಹಾರ ಸಿಗಬೇಕು. ಕೊರೊನಾ ಹಿನ್ನೆಲೆ ಸರ್ಕಾರದಿಂದ ಸಿಗುವ ಪರಿಹಾರ ಕಾರ್ಯಗಳು ಜಿಲ್ಲೆಯ ಜನರಿಗೆ ಸಿಗಬೇಕು ಎಂದು ಒತ್ತಾಯಿಸಿದರು.