ಬೆಂಗಳೂರು: ಒಂದೆಡೆ ಬಿಜೆಪಿ ಬಂಡಾಯ ಶಮನ ಯತ್ನಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಿ ಪಕ್ಷದ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದರೆ ಇನ್ನೊಂದೆಡೆ ಶಾಸಕರ ಭವನದಲ್ಲಿ ರೆಬೆಲ್ಗಳು ಸಭೆ ನಡೆಸಿದ್ದಾರೆ. ರಾಜ್ಯಕ್ಕೆ ಮೂರು ದಿನದ ಭೇಟಿ ಪ್ರಯುಕ್ತ ಇಂದು ನಗರಕ್ಕೆ ಆಗಮಿಸಿರುವ ಅರುಣ್ ಸಿಂಗ್ ರಾಜ್ಯ ಬಿಜೆಪಿ ನಾಯಕರ ಮನಸ್ತಾಪ ತಣಿಸುವ ಯತ್ನ ಮಾಡುತ್ತಿದ್ದಾರೆ. ಆದರೆ ಇದೇ ಸಂದರ್ಭ ನಿನ್ನೆ ದೆಹಲಿಯಿಂದ ಹಿಂದಿರುಗಿರುವ ಅರವಿಂದ್ ಬೆಲ್ಲದ್ ಬೆಂಗಳೂರಿನ ಶಾಸಕರ ಭವನದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜತೆ ಸಭೆ ನಡೆಸಿದ್ದಾರೆ. ಈಗಾಗಲೇ ಸಿಎಂ ಆಕಾಂಕ್ಷಿಯಾಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ತೆರಳಿದ್ದ ಬೆಲ್ಲದ್ ಜತೆ ಯತ್ನಾಳ್ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ.
ಎರಡು ಗಂಟೆಗೂ ದೀರ್ಘ ಚರ್ಚೆ:
ಶಾಸಕರ ಭವನದಲ್ಲಿ ಇಬ್ಬರೂ ನಾಯಕರು ಎರಡು ಗಂಟೆಯಿಂದ ಚರ್ಚೆ ನಡೆಸಿದ್ದಾರೆ. ರಾಜ್ಯದಲ್ಲಿ ಸಿಎಂ ಬದಲಾವಣೆ, ನಾಯಕತ್ವ ಬದಲಾವಣೆಯಂತಹ ಮಾತುಗಳು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಈ ನಾಯಕರು ಒಂದಾಗಿ ಚರ್ಚಿಸಿರುವುದು ತೀವ್ರ ಕುತೂಹಲ ಮೂಡಿಸಿದೆ. ಯತ್ನಾಳ್ ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ. ಆದರೆ ಪಕ್ಷ ಇವರ ವಿರುದ್ಧ ಕ್ರಮ ಕೈಗೊಳ್ಳುವ ಯಾವ ಕಾರ್ಯವನ್ನೂ ಮಾಡಿಲ್ಲ. ಈ ಮಧ್ಯೆ ಸಿಎಂ ಆಕಾಂಕ್ಷಿ ಎಂದೇ ಗುರುತಿಸಿಕೊಂಡಿರುವ ಬೆಲ್ಲದ್ ಜತೆ ಇಂದು ಸುದೀರ್ಘ ಮಾತುಕತೆ ನಡೆಸಿದ್ದು ಅಚ್ಚರಿಗೆ ಕಾರಣವಾಗಿದೆ.
ಇದನ್ನೂ ಓದಿ: ನಾಯಕತ್ವ ಬದಲಾವಣೆ ಚರ್ಚೆ ನಡೆದಿಲ್ಲ ಎಂದ್ರು ಅರುಣ್ ಸಿಂಗ್...No Change ಅಂದ್ರು ಕಟೀಲ್
ಈ ಭೇಟಿಯ ಕಾರಣ, ಮಾತುಕತೆ ವಿವರ ಲಭಿಸಿಲ್ಲ. ಬಿಜೆಪಿ ನಾಯಕರಾಗಲಿ, ಖುದ್ದು ಸಭೆ ನಡೆಸಿದ ಇಬ್ಬರು ನಾಯಕರಾಗಲಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಸಹಜವಾದದ್ದಲ್ಲ, ನಿರ್ಲಕ್ಷಿಸುವಂತದ್ದಲ್ಲ ಎನ್ನುವುದು ಅರುಣ್ ಸಿಂಗ್ ಆಗಮನದಿಂದ ಅರಿವಾಗುತ್ತಿದೆ.