ಬೆಂಗಳೂರು: ದೀಪಾವಳಿ ಗಿಫ್ಟ್ ಹೆಸರಲ್ಲಿ ಪರ್ತಕರ್ತರಿಗೆ ಹಣ ನೀಡಿದ ಪ್ರಕರಣದ ಬಗ್ಗೆ ನಾವು ಮೂಗು ತೂರಿಸೋ ಕೆಲಸ ಮಾಡುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಯಾರು ಏನು ಆರೋಪ ಮಾಡಿದ್ದಾರೋ ಅವರಿಗೆ ಕೇಳಬೇಕು. ಅವರ ಬಳಿಯೇ ಕೇಳಬೇಕು, ನನ್ನ ಹತ್ತಿರ ಯಾವುದೇ ಸಾಕ್ಷಿ ಆಧಾರಗಳಿಲ್ಲ. ಲೋಕಾಯುಕ್ತಕ್ಕೆ ದೂರು ನೀಡಿದ್ರೆ ಲೋಕಾಯುಕ್ತ ತನಿಖೆ ಮಾಡಲಿದೆ ಎಂದು ತಿಳಿಸಿದರು.
ಇನ್ಸ್ ಪೆಕ್ಟರ್ ನಂದೀಶ್ ಲಂಚ ಕೊಟ್ಟಿರುವ ಬಗ್ಗೆ ತನಿಖೆ: ಕೆ.ಆರ್ ಪುರಂ ಇನ್ಸ್ಪೆಕ್ಟರ್ ನಂದೀಶ್ 70, 80 ಲಕ್ಷ ಕೊಟ್ಟು ಬಂದಿದ್ದರು ಎಂಬ ಸಚಿವ ಎಂ.ಟಿ.ಬಿ ನಾಗರಾಜ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಎಂಟಿಬಿ ನಾಗರಾಜ್ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅವರ ಬಳಿ ನಾನು ಮಾಹಿತಿ ಪಡೆಯುತ್ತೇನೆ. ಸದ್ಯ ಅವರು ಕಲಬುರಗಿ ಜಿಲ್ಲೆಯಲ್ಲಿದ್ದಾರೆ. ಈ ಬಗ್ಗೆ ಅವರೇ ಇವತ್ತು ಸ್ಪಷ್ಟೀಕರಣ ಕೊಡಲಿದ್ದಾರೆ ಎಂದರು.
ನಗರದಲ್ಲಿ ತಡ ರಾತ್ರಿಯವರೆಗೂ ಕ್ಲಬ್, ಪಬ್ ಓಪನ್ ಮಾಡುತ್ತಿದ್ದಾರೆ. ಮೊದಲಿಂದಲೂ ಇದರ ವಿರುದ್ಧ ಕ್ರಮಕ್ಕೆ ನಾನು ಬದ್ಧನಾಗಿದ್ದೇನೆ. ಈ ಬಗ್ಗೆ ನಾನು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಅಲ್ಲಿ ಅವತ್ತು ರೇವ್ ಪಾರ್ಟಿ ನಡೆಯುತ್ತಿತ್ತು. ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಹೀಗಾಗಿ ಕೆ.ಆರ್ ಪುರಂ ಇನ್ಸ್ಪೆಕ್ಟರ್ ನಂದೀಶ್ ಅವರನ್ನ ಕಮಿಷನರ್ ಸಸ್ಪೆಂಡ್ ಮಾಡಿದ್ದರು. ಆದ್ರೆ ಅವರಿಗೆ ಹೃದಯಾಘಾತ ಆಗಿದೆ. ಇದೊಂದು ದುರದೃಷ್ಟಕರ ಘಟನೆ.
ಇದಕ್ಕೆ ಬೇರೆ ಯಾವುದೋ ಅರ್ಥ ಕಲ್ಪಿಸೋದು ಬೇಡ ಎಂದರು. ಈಗ ಯಾವುದ್ಯಾವುದಕ್ಕೂ ಲಿಂಕ್ ಮಾಡಿ ಮಾತನಾಡುವುದು ಸರಿಯಲ್ಲ. ನಾನು ಆರಂಭದಿಂದಲೂ ಬೆಂಗಳೂರಿನಲ್ಲಿ ಕ್ಯಾಬರೆ ಇಸ್ಪೀಟ್ ಕ್ಲಬ್, ಕ್ಯಾಸಿನೊ ಇವೆಲ್ಲವೂ ಬಂದಾಗಬೇಕು ಎಂದು ಕೆಲಸ ಮಾಡಿದ್ದೇನೆ. ಆದರೆ ಇತ್ತೀಚಿಗೆ ಮತ್ತೆ ಓಪನ್ ಮಾಡುವ ಕೆಲಸ ಕೆಲ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ಕಮಿಷನರ್ ಎಲ್ಲರಿಗೂ ಸುತ್ತೋಲೆ ಕಳಿಸಿದ್ದರು. ಎಲ್ಲವನ್ನು ಬಂದ್ ಮಾಡಬೇಕು ಎಂದು ಸೂಚಿಸಿದ್ದರು. ಆ ರೀತಿ ನಡೆಯುತ್ತಿದ್ದರೆ ಸ್ಥಳೀಯ ಅಧಿಕಾರಿಗಳು ಹೊಣೆಗಾರರನ್ನಾಗಿ ಮಾಡಲಾಗುವುದು ಅಂತ ಹೇಳಿದ್ದರು. ಸೂಚನೆ ಕೊಟ್ಟಿದ್ದರೂ ಅಲ್ಲಿ ರೇವ್ ಪಾರ್ಟಿ ನಡೆಸಲಾಗ್ತಿತ್ತು. ಪಾರ್ಟಿಯಲ್ಲಿ ಸುಮಾರು 20 ಜನ ಸೂಡಾನ್ ಪ್ರಜೆಗಳಿದ್ದರು.
ಸುಮಾರು 30ರಷ್ಟು ಹೆಣ್ಣು ಮಕ್ಕಳು ಕೂಡ ಇದ್ದರು. ಹೀಗಾಗಿ ಸಿಸಿಬಿ ರೈಡ್ ಮಾಡಿತ್ತು, ಅದರ ಹಿನ್ನೆಲೆಯಲ್ಲಿ ಕಮಿಷನರ್ ನಂದೀಶ್ ಅವರನ್ನು ಸಸ್ಪೆಂಡ್ ಮಾಡಿದ್ದಾರೆ. ಇದೇ ಮಾಹಿತಿಯನ್ನು ನನಗೂ ಕೂಡ ಕಳಿಸಿದ್ದರು. ಇದಕ್ಕೂ ಅವರ ಸಾವಿಗೂ ಯಾವುದೇ ರೀತಿಯ ಸಂಬಂಧ ಇದೆಯೋ ನನಗೆ ತಿಳಿದಿಲ್ಲ. ನಂದೀಶ್ ಅವರಿಗೆ ಚಿಕ್ಕ ಮಕ್ಕಳಿದ್ದಾರೆ, ಅವರ ಸಾವು ನನಗೂ ಬೇಸರ ತಂದಿದೆ ಎಂದರು.
ಗೃಹಮಂತ್ರಿಯಾಗಿ ಅಪವಾದಗಳು ಬರದಂತೆ ಕಾರ್ಯ ಮಾಡುತ್ತಿದ್ದೇನೆ: ನಾನು ಹೋಂ ಮಿನಿಸ್ಟರ್ ಯಾವುದೇ ಅಪವಾದಗಳು ಬಾರದೇ ಇದ್ದ ಹಾಗೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ನಮ್ಮ ಪೊಲೀಸ್ ಅಧಿಕಾರಿಗಳು ವರ್ಗಾವಣೆಗೆ ದುಡ್ಡು ಕೊಟ್ಟು ಬಂದು, ಬಳಿಕ ಹಣ ದುಡಿಯೋಕೆ ಹೋದರೆ ಇಡೀ ವ್ಯವಸ್ಥೆ ಗಬ್ಬೆದ್ದು ಹೋಗಲಿದೆ. ಹೀಗಾಗಿ ಬಿಗಿಯಾಗಿ ನಿಂತು ನಾನು ಕೆಲಸ ಮಾಡುತ್ತಿದ್ದೇನೆ. ಹಾಗಾಗಿ ಅನಾವಶ್ಯಕವಾಗಿ ಅಪಪ್ರಚಾರ ಮಾಡಬಾರದು. ಸತ್ಯ ಏನು ಅನ್ನೋದನ್ನು ತಿಳಿದುಕೊಳ್ಳಬೇಕು. ಇಡೀ ಪ್ರಕರಣದ ವಿಚಾರಣೆ ಆಗಲಿದೆ. ಹಿರಿಯ ಅಧಿಕಾರಿಗಳಿಂದ ಸ್ಷಷ್ಟನೆ ನೀಡಲು ಕಮಿಷನರ್ಗೆ ಸೂಚಿಸುತ್ತೇನೆ ಎಂದು ತಿಳಿಸಿದರು.
ದೆಹಲಿಯಲ್ಲಿ ಎರಡು ದಿನ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಚಿಂತನ ಶಿಬಿರ ನಡೆದಿದೆ. ಎಲ್ಲಾ ರಾಜ್ಯಗಳ ಗೃಹ ಸಚಿವರುಗಳು ಗೃಹ ಖಾತೆ ಹೊಂದಿರುವ ಸಿಎಂಗಳು ಕೂಡ ಭಾಗಿಯಾಗಿದ್ರು. ದೇಶದ ಆಂತರಿಕ ಭದ್ರತೆಯ ಬಗ್ಗೆ ಬಹಳ ಗಂಭೀರವಾಗಿ ಚರ್ಚೆಯಾಗಿದೆ. ವಿಶೇಷವಾಗಿ ಸೈಬರ್ ಕ್ರೈಂ, ಬಾರ್ಡರ್ಗಳಲ್ಲಿ ನಡೆಯುವ ಚಟುವಟಿಕೆಗಳು, ಮಾದಕ ವಸ್ತು ಸರಬರಾಜು ಬಗ್ಗೆ ಹೆಚ್ಚು ಚರ್ಚೆಯಾಗಿದೆ. ಈ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಯಾವ ಯಾವ ರಾಜ್ಯ ಏನು ಮಾಡಿದೆ ಎಂಬುದು ಕುರಿತಾಗಿ ಮಾಹಿತಿ ಪಡೆದರು. ವಿಶೇಷವಾಗಿ ಕರ್ನಾಟಕದ ಕ್ರಮಗಳು ಉಲ್ಲೇಖ ಆಗಿದೆ ಎಂದು ಸಚಿವರು ಹೇಳಿದರು.
ಕರ್ನಾಟಕದಲ್ಲಿ ಕನ್ವಿಕ್ಷನ್ ರೇಟ್ ಹೆಚ್ಚಳ ಮಾಡಲು ಕರ್ನಾಟಕದಲ್ಲಿ ಸೀನ್ ಆಫ್ ಕ್ರೈಂ ಆಫೀಸರ್ ಆಗಿ 206 ಜನರನ್ನು ನೇಮಕ ಮಾಡಿದ್ವಿ. ಹೆಚ್ಚು ಕಡಿಮೆ ಒಂದು ತಾಲೂಕಿನಲ್ಲಿ ಒಬ್ಬರು SOCO ಆಫೀಸರ್ಸ್ ಇರ್ತಾರೆ. ಈ ವಿಚಾರ ಸಭೆಯಲ್ಲಿ ಗೃಹ ಸಚಿವರಿಗೆ ಇಂಪ್ರೆಸ್ ಮಾಡಿತು. ಎರಡು ಮೂರು ಬಾರಿ ಭಾಷಣದಲ್ಲಿ ಉಲ್ಲೇಖ ಮಾಡಿದ್ರು. ಕರ್ನಾಟಕದ ಕ್ರಮವನ್ನು ಇಡೀ ದೇಶಕ್ಕೆ ಅಳವಡಿಸುವ ಬಗ್ಗೆ ಮಾತನಾಡಿದರು. ಕರ್ನಾಟಕ ಸ್ವಲ್ಪ ಮುಂಚೂಣಿಯಲ್ಲಿದ್ದು, ನಮಗೆ ಸಂತೋಷವಾಗಿದೆ. ಅವರು ಕೊಟ್ಟಂತ ಅನುದಾನವನ್ನು ಕೂಡ ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಆಪರೇಷನ್ ಕಮಲದ ಕುರಿತು ಸುಪ್ರೀಂ ಕೋರ್ಟ್ ಸ್ವಯಂ ದೂರು ದಾಖಲಿಸಿಕೊಳ್ಳಬೇಕು: ಡಿ.ಕೆ.ಶಿವಕುಮಾರ್