ಬೆಂಗಳೂರು: ಬೆಳಗಾವಿಗೆ ಬಂದು ಜನರ ಭಾವನೆ ಕೆರಳಿಸುವ ಕೆಲಸ ಮಾಡಿದರೆ ಅವರ ವಿರುದ್ದ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ವಿಕಾಸನಸೌಧದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ, ಗಡಿ ಸಾಮರಸ್ಯ ಹಾಗೂ ಇತರ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಅವರು, ಇವತ್ತಿನ ಸಭೆಯಲ್ಲಿ ಗಡಿ ವಿಚಾರವಾಗಿ ಶಾಂತಿ ಸುವ್ಯವಸ್ಥೆ ಬಗ್ಗೆ ಚರ್ಚೆ ಮಾಡಿದ್ದೇವೆ. ಯಾರೇ ಆಗಲಿ ಜನರ ಭಾವನೆಯನ್ನು ಕೆರಳಿಸು ಕೆಲಸ ಮಾಡಬಾರದು ಎಂದರು.
ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬಂದರೇನು, ಬೆಂಗಳೂರಿಗೂ ಬರಲಿ. ನಾವು ಬಾಂಬೆಗೂ ಹೋಗುತ್ತೇವೆ. ಯಾವ ಸಮಯಕ್ಕೆ ಬರಬೇಕು ಏನಕ್ಕೆ ಬರಬೇಕು ಅನ್ನೋದು ಮುಖ್ಯವಾಗುತ್ತದೆ ಎಂದರು. ಸಚಿವರಾಗಬಹುದು, ಸಾಮಾನ್ಯ ಜನರಾಗಬಹುದು ಕಾನೂನು ದೃಷ್ಟಿಯಲ್ಲಿ ಎಲ್ಲರೂ ಒಂದೇ. ಕಾನೂನಿನ ವಿರುದ್ಧವಾಗಿ ಹೋದರೆ ಕ್ರಮ ಆಗುತ್ತದೆ. ಶಾಂತಿ ಭಂಗ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬರುವುದಿಲ್ಲ ಎಂದು ಅನಿಸುತ್ತದೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸಭೆಯಲ್ಲಿ ರಾಜ್ಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ (ಒಳಾಡಳಿತ ಇಲಾಖೆ), ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್, ಅಲೋಕ್ ಕುಮಾರ್, ಎಡಿಜಿಪಿ (ಕಾನೂನು ಸುವ್ಯವಸ್ಥೆ), ದಯಾನಂದ ಎಡಿಜಿಪಿ (ಗುಪ್ತಚರ), ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ (ಆಂತರಿಕ ಭದ್ರತೆ), ಹಿತೇಂದ್ರ ಎಡಿಜಿಪಿ (ಅಪರಾಧ) ಉಪಸ್ಥಿತರಿದ್ದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಕರವೇ ಪ್ರತಿಭಟನೆ: 'ಮಹಾ' ಲಾರಿಗಳಿಗೆ ಕಲ್ಲು, ಹಲವರು ಪೊಲೀಸ್ ವಶಕ್ಕೆ