ಬೆಂಗಳೂರು: ಬ್ಯಾಂಕಿಂಗ್ ಸೇರಿದಂತೆ ಇತರೆ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಬರೆಯಲು ಅನುಮತಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿರ್ಧಾರವನ್ನು ರಾಜ್ಯ ಬಿಜೆಪಿ ಶ್ಲಾಘಿಸಿದೆ.
ಐಬಿಪಿಎಸ್ ಪರೀಕ್ಷೆಯನ್ನು ಇದೀಗ ಕನ್ನಡದಲ್ಲಿಯೂ ಸಹ ಬರೆಯಲು ಅವಕಾಶ ಕಲ್ಪಿಸಿರುವುದು ಎಲ್ಲಾ ಕನ್ನಡಪರ ಹೋರಾಟಗಾರರಿಗೆ ಸಂದ ಜಯ. ಇದನ್ನು ಸಾಧ್ಯವಾಗಿಸುವಂತೆ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ ಹಾಗೂ ಕೇಂದ್ರ ವಿತ್ತ ಸಚಿವರಾದ ಸಹೋದರಿ ನಿರ್ಮಲಾ ಸೀತಾರಾಮನ್ ಅವರಿಗೆ ಎಲ್ಲಾ ಕನ್ನಡಿಗರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಟ್ವೀಟ್ ಮಾಡಿದ್ದಾರೆ.
ಗ್ರಾಮೀಣ ಬ್ಯಾಂಕ್ಗಳ ಹುದ್ದೆಗಳ ನೇಮಕಾತಿಗೆ ಕನ್ನಡ ಸೇರಿ 13 ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಬಂದಿದ್ದ ಬೇಡಿಕೆಗೆ ಸಮ್ಮತಿ ನೀಡಿದ್ದಕ್ಕೆ ಧನ್ಯವಾದಗಳು, ಇದರಿಂದಾಗಿ ಲಕ್ಷಾಂತರ ಆಕಾಂಕ್ಷಿಗಳಿಗೆ ಸಹಾಯವಾಗಲಿದೆ. ಬ್ಯಾಂಕಿಂಗ್ ಸೇವಾ ವಲಯಕ್ಕೆ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಬರಲಿದೆ. ಜೊತೆಗೆ ಉದ್ಯೋಗಾವಕಾಶವನ್ನೂ ಹೆಚ್ಚಿಸಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮೂಲಕ ನಿರ್ಮಲಾ ಸೀತಾರಾಮನ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ.