ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಇವತ್ತಿಗೇ 7ನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಮುಷ್ಕರದ ನಡುವೆಯೂ ಬಸ್ ಓಡಿಸಿದವರಿಗೆ ಬಿಎಂಟಿಸಿ ಅಭಿನಂದನೆ ಸಲ್ಲಿಸಿದೆ.
ಹಲವು ಬೇಡಿಕೆಗಳ ಜೊತೆಗೆ ಆರನೇ ವೇತನ ಜಾರಿಗೊಳಿಸುವಂತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಮುಷ್ಕರವನ್ನ ಹಮ್ಮಿಕೊಳ್ಳಲಾಗಿದೆ. ಮುಷ್ಕರದ ಹಿನ್ನೆಲೆ ಕಳೆದ ಒಂದು ವಾರದಿಂದ ಬಹುತೇಕ ಬಸ್ ಸಂಚಾರ ಸ್ಥಗಿತವಾಗಿದೆ. ಆದರೂ ಕೆಲವು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿ ಮುಷ್ಕರದ ನಡುವೆಯೂ ಬಸ್ ಓಡಿಸಿದ್ದು, ಅಂತಹವರಿಗೆ ಬಿಎಂಟಿಸಿ ಯುಗಾದಿ ಹಬ್ಬದ ಪ್ರಯುಕ್ತ ನೌಕರರನ್ನ ಅಭಿನಂದಿಸಿದೆ.
ಮುಷ್ಕರದ ನಡುವೆ ಕೆಲಸಕ್ಕೆ ಹಾಜರಾದ ಚಾಲಕ ಮತ್ತು ನಿರ್ವಾಹಕರಿಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿಯಿಂದ ಅಭಿನಂದನಾ ಪತ್ರ ನೀಡಲಾಗಿದೆ. ಮುಷ್ಕರ ಹೂಡಿ ಸಾಕಷ್ಟು ನೌಕರರು ಕೆಲಸಕ್ಕೆ ಹಾಜರಾಗಿಲ್ಲ, ಇದ್ರಿಂದಾಗಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಜೊತೆಗೆ ನಿಗಮದ ಆದಾಯಕ್ಕೂ ಖೋತಾ ಬಿದ್ದಿದೆ. ಆದ್ರೆ ನೀವು ನೌಕರರು ಸಂಸ್ಥೆ ಹಾಗು ಸಾರ್ವಜನಿಕರ ಹಿತದೃಷ್ಟಿಯನ್ನ ಮನಸ್ಸಿನ್ನಲ್ಲಿಟ್ಟುಕೊಂಡು ಕೆಲಸಕ್ಕೆ ಹಾಜರಾಗಿದ್ದೀರಿ. ನೀವು ಬಿಎಂಟಿಸಿ ಸಂಸ್ಥೆಯ ಉದ್ಯೋಗಿಗಳಾಗಿರುವುದು ಹೆಮ್ಮೆಯ ವಿಚಾರ ಎಂದು ಉಲ್ಲೇಖಿಸಿ ಅಭಿನಂದನೆ ಪತ್ರ ವಿತರಣೆ ಮಾಡಿದರು.