ಬೆಂಗಳೂರು: ಆಪ್ತರಿಗೆ, ವೀರಶೈವ ಲಿಂಗಾಯತ ಸಮುದಾಯದವರಿಗೆ ಆದ್ಯತೆ ನೀಡಿ ನಿಗಮ ಮಂಡಳಿ ನೇಮಕಾತಿ ಮಾಡಿ ಆದೇಶ ಹೊರಡಿಸುವ ಮೂಲಕ ಸಂಪುಟ ವಿಸ್ತರಣೆಗೆ ಅನುಮತಿ ನೀಡಲು ಮೀನಮೇಷ ಎಣಿಸುತ್ತಿರುವ ಹೈಕಮಾಂಡ್ ಧೋರಣೆಗೆ ಹಾಗೂ ನಾಯಕತ್ವ ಬದಲಾವಣೆ ಕೂಗೂ ಮೊಳಗಿಸುತ್ತಿರುವ ನಾಯಕರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಠಕ್ಕರ್ ನೀಡಿದ್ದಾರೆ.
ಹೌದು ಅಚ್ಚರಿ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದಾರೆ. ಅದೂ ಕೂಡ ಸಿಎಂ ಜಿಲ್ಲಾ ಪ್ರವಾಸಕ್ಕೆ ತೆರಳಿದ ನಂತರವೇ ಆದೇಶ ಹೊರಬಿದ್ದಿದ್ದು, ಅತೃಪ್ತರು, ಅಸಮಧಾನಿತರು ತಮ್ಮ ನಿವಾಸಕ್ಕೆ, ಕಚೇರಿಗೆ ಬಾರದಂತೆ ಸಿಎಂ ನೋಡಿಕೊಂಡಿದ್ದಾರೆ.
ರಾಜ್ಯ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ ವೇಳೆ ಶಾಸಕರಿಗೆ ಉಡುಗೊರೆ ರೂಪದಲ್ಲಿ 20 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಿದ್ದ ಸಿಎಂ ಯಡಿಯೂರಪ್ಪ ಈಗ ಸಂಪುಟ ಸರ್ಕಸ್, ನಾಯಕತ್ವ ಬದಲಾವಣೆ ಕೂಗಿನ ನಡುವೆ 33 ನಿಗಮ ಮಂಡಳಿ, ಪ್ರಾಧಿಕಾರ, ಆಯೋಗ ಸೇರಿ 35 ಅಧ್ಯಕ್ಷರನ್ನು ನೇಮಿಸಿ ಪರೋಕ್ಷವಾಗಿ ಹೈಕಮಾಂಡ್ಗೆ ಸಂದೇಶ ರವಾನಿಸಿದ್ದಾರೆ. ಎರಡು ಕ್ಷೇತ್ರಗಳ ಉಪ ಚುನಾವಣೆ ಗೆದ್ದು ತಮ್ಮ ಸಾಮರ್ಥ್ಯ ಏನು ಎನ್ನುವುದನ್ನು ತೋರಿಸುವ ಜೊತೆಯಲ್ಲಿ ನಿಗಮ ಮಂಡಳಿ ನೇಮಕಾತಿ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ ಎನ್ನಲಾಗಿದೆ.
ಓವೈಸಿ ರಕ್ಷಿಸುತ್ತಿರುವ ಪ್ರತಿಯೊಬ್ಬ ರೋಹಿಂಗ್ಯಾನನ್ನು ಹೊರಹಾಕುತ್ತೇವೆ: ತೇಜಸ್ವಿ ಸೂರ್ಯ
ಆಪ್ತರಿಗೆ ಆದ್ಯತೆ ನೀಡಿ ಅವರನ್ನು ತಮ್ಮೊಂದಿಗೆ ಇರಿಸಿಕೊಳ್ಳುವಲ್ಲಿ ಸಫಲರಾದ ಸಿಎಂ, ಸಮುದಾಯದ ಮುಖಂಡಿರಿಗೆ ಆದ್ಯತೆ ನೀಡುವ ಮೂಲಕ ಇಡೀ ಸಮುದಾಯದ ದೊಡ್ಡ ಮಟ್ಟದ ಬೆಂಬಲವನ್ನು ತಮ್ಮೊಂದಿಗೆ ಉಳಿಸಿಕೊಳ್ಳುವ ನಡೆ ಅನುಸರಿಸಿದ್ದಾರೆ. ಇಲ್ಲಿ ಬಹುಪಾಲು ತಮ್ಮ ಪರ ಹಾಗೂ ಪುತ್ರ ವಿಜಯೇಂದ್ರ ಅವರ ಜೊತೆ ಆಪ್ತತೆ ಇರುವವರಿಗೆ ಸಿಎಂ ಆದ್ಯತೆ ನೀಡಿದ್ದು, ಪಕ್ಷದ ಪರ ಅಥವಾ ಸಂಘ ಪರಿವಾರದ ಬೆಂಬಲಿತರಿಗೆ ಕನಿಷ್ಠ ಅವಕಾಶ ನೀಡಲಾಗಿದೆ. ಆ ಮೂಲಕ ಸಿಎಂ ಇಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿಕೊಂಡಿದ್ದಾರೆ.
ತಮ್ಮ ದಿನಚರಿಯನ್ನು ಸದಾ ಚಟುವಟಿಕೆಯಿಂದ ಇರಿಸಿಕೊಂಡಿರುವ ಸಿಎಂ ಯಡಿಯೂರಪ್ಪ ನಿರಂತರವಾಗಿ ನಿತ್ಯ ಒಂದಲ್ಲಾ ಒಂದು ಸಭೆ, ನಿಯೋಗದ ಭೇಟಿ, ಕಾರ್ಯಕ್ರಮಗಳಲ್ಲಿ ತೊಡಗಿಕೊಂಡು ಬರುತ್ತಿದ್ದಾರೆ. ಆಗಾಗ ಜಿಲ್ಲಾ ಕೇಂದ್ರಗಳಿಗೂ ಭೇಟಿ ನೀಡುತ್ತಿದ್ದಾರೆ. ಕ್ರಿಯಾಶೀಲರಾಗಿ ಕೆಲಸ ಮಾಡುವ ಮೂಲಕ ವಯಸ್ಸಿನ ಕಾರಣವನ್ನು ಮುಂದಿಟ್ಟು ಅಧಿಕಾರದಿಂದ ಇಳಿಸುವ ಪ್ರಸ್ತಾಪ ಹೈಕಮಾಂಡ್ನಿಂದ ಬಾರದಂತೆ ಮುನ್ನೆಚ್ಚರಿಕೆ ವಹಿಸಿಕೊಂಡು ಬರುತ್ತಿದ್ದಾರೆ.
ಮೈತ್ರಿ ಸರ್ಕಾರದ ಪತನ ನಂತರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲು ಅನುಮತಿ ನೀಡುವುದಕ್ಕೆ ಹೈಕಮಾಂಡ್ ವಿಳಂಬ ಧೋರಣೆ ಅನುಸರಿಸುತ್ತಿದ್ದಾಗ ಏಕಾಏಕಿ ತಾವೇ ರಾಜಭವನಕ್ಕೆ ಸಂದೇಶ ಕಳುಹಿಸಿ ಪ್ರಮಾಣ ವಚನ ಸ್ವೀಕಾರಕ್ಕೆ ಅನುಮತಿ ಕೋರಿದ್ದರು ಇದೀಗ ಅಂತಹ ಪ್ರಯತ್ನ ಸಂಪುಟ ವಿಸ್ತರಣೆಯಲ್ಲಿ ಆದರೂ ಅಚ್ಚರಿ ಇಲ್ಲ. ಆದರೆ, ಸಿಎಂ ಯಡಿಯೂರಪ್ಪ ಅಂತಹ ಪ್ರಯತ್ನಕ್ಕೂ ಮೊದಲು ನಿಗಮ ಮಂಡಳಿಗಳ ನೇಮಕಾತಿ ಮಾಡಿ ಹೈಕಮಾಂಡ್ಗೆ ತಮ್ಮ ಸಾಮರ್ಥ್ಯದ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಆ ಮೂಲಕ ತಮ್ಮನ್ನು ಅಸ್ಥಿರಗೊಳಿಸುವ ಯತ್ನಕ್ಕೆ ಕೈ ಹಾಕದಂತೆ ನಾಯಕತ್ವ ಬದಲಾವಣೆ ಕೂಗು ಹಾಕುತ್ತಿರುವವರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ ಎನ್ನಲಾಗುತ್ತಿದೆ.