ಬೆಂಗಳೂರು : ವೃಷಭಾವತಿ ನದಿ ಪುನಶ್ಚೇತನಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಅಧ್ಯಯನ ನಡೆಸಲು ಹಾಗೂ ಅಗತ್ಯ ಮಾರ್ಗದರ್ಶ ನೀಡಲು ರಾಷ್ಟ್ರೀಯ ಪರಿಸರ ಅಧ್ಯಯನ ಸಂಶೋಧನಾ ಸಂಸ್ಥೆಯನ್ನು (ನೀರಿ) ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ನಗರದ ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ವಕೀಲರು ಈ ಮಾಹಿತಿ ನೀಡಿದ್ದಾರೆ. ಹೇಳಿಕೆ ಪರಿಗಣಿಸಿದ ಪೀಠ, ವೃಷಭಾವತಿ ನದಿ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ನೀರಿಯೊಂದಿಗೆ ಬಿಬಿಎಂಪಿ ಹಾಗೂ ಜಲಮಂಡಳಿ ಒಪ್ಪಂದ ಮಾಡಿಕೊಂಡು, ಸರ್ವೇ ನಡೆಸಬೇಕು. ಅದಕ್ಕೆ ತಗುಲುವ ವೆಚ್ಚವನ್ನು ಪಾಲಿಕೆ ಹಾಗೂ ಜಲಮಂಡಳಿಯೇ ಪಾವತಿಸಬೇಕು. ಅರ್ಜಿಯಲ್ಲಿ ನೀರಿಯನ್ನೂ ಪ್ರತಿವಾದಿಯನ್ನಾಗಿಸಿ, ಮುಂದಿನ ವಿಚಾರಣೆ ವೇಳೆ ನೀರಿ ಅಧಿಕಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ, ನದಿ ಪುನಶ್ಚೇತನಕ್ಕೆ ಅನುಸರಿಸಬಹುದಾದ ಕ್ರಮಗಳ ಕುರಿತು ತಿಳಿಸಬೇಕು. ಪ್ರಕರಣವನ್ನು ನ್ಯಾಯಾಲಯ ಮೇಲ್ವಿಚಾರಣೆ ನಡೆಸಲಿದೆ ಎಂದು ತಿಳಿಸಿ, ವಿಚಾರಣೆಯನ್ನು ನವೆಂಬರ್ 20ಕ್ಕೆ ಮುಂದೂಡಿತು.
ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್, ಕಳೆದ ವಾರ ಸುರಿದ ಭಾರಿ ಮಳೆಗೆ ವೃಷಭಾವತಿ ನದಿಯ ತಡೆಗೋಡೆಗಳು ಒಡೆದ ಪರಿಣಾಮ ರಾಜರಾಜೇಶ್ವರಿ ನಗರದ ಬಹುತೇಕ ಪ್ರದೇಶ ಮುಳುಗಡೆಯಾಗಿತ್ತು. ರಾಜಕಾಲುವೆ ಒತ್ತುವರಿ ಮಾಡಿರುವುದೇ ಇದಕ್ಕೆ ಕಾರಣ ಎಂದು ಪೀಠದ ಗಮನಕ್ಕೆ ತಂದರು. ಅದಕ್ಕೆ ನ್ಯಾಯಪೀಠ, ಈ ವಿಚಾರದ ಬಗ್ಗೆಯೂ ನೀರಿ ಗಮನ ಹರಿಸಬೇಕೆಂದು ಸೂಚಿಸಿತು.