ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷರು, ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿ ನೇಮಕಾತಿಗೆ ಸುಪ್ರೀಂಕೋರ್ಟ್ ನಿರ್ದೇಶನದಂತೆಯೇ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಹೈಕೋರ್ಟ್ ಅನುಮತಿ ಪಡೆಯದೇ ಅಧ್ಯಕ್ಷರನ್ನಾಗಲೀ ಅಥವಾ ಸದಸ್ಯರನ್ನಾಗಲೀ ನೇಮಿಸಬಾರದು ಎಂದು ನಿರ್ಬಂಧ ವಿಧಿಸಿದೆ.
2020ರ ಜೂ .19ರಂದು ಕೆಎಸ್‌ಪಿಸಿಬಿ ಅಧ್ಯಕ್ಷರ ನೇಮಕಾತಿಗೆ ಮಾರ್ಗಸೂಚಿ ರೂಪಿಸಿ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಚಿಕ್ಕಬಳ್ಳಾಪುರದ ಆಂಜನೇಯ ರೆಡ್ಡಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ರಾಜ್ಯ ಸರ್ಕಾರ ಕೆಎಸ್‌ಪಿಸಿಬಿ ಅಧ್ಯಕ್ಷರ ನೇಮಕಾತಿಗೆ ರೂಪಿಸಿರುವ ಮಾರ್ಗಸೂಚಿಗಳು ಜಲಕಾಯ್ದೆ ಹಾಗೂ ಸುಪ್ರೀಂಕೋರ್ಟ್ ಆದೇಶಕ್ಕೆ ಅನುಗುಣವಾಗಿಲ್ಲ. ಮಾಲಿನ್ಯ ನಿಯಂತ್ರಣ, ತ್ಯಾಜ್ಯ ನಿರ್ವಹಣೆ ಹಾಗೂ ಪರಿಸರ ರಕ್ಷಣೆಯಲ್ಲಿ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಹೀಗಾಗಿ ಅಧ್ಯಕ್ಷರು, ಸದಸ್ಯರು ಮತ್ತು ಸದಸ್ಯರ ಕಾರ್ಯದರ್ಶಿಗಳಿಗೆ ನಿಗದಿತ ವಿದ್ಯಾರ್ಹತೆ, ತಾಂತ್ರಿಕ ಜ್ಞಾನ ಮತ್ತು ಸೇವಾನುಭವ ನಿಗದಿಪಡಿಸಲಾಗಿದೆ. ಆದರೆ ಸರ್ಕಾರದ ಮಾರ್ಗಸೂಚಿಗಳು ಕಾಯ್ದೆ ಮತ್ತು ಸುಪ್ರೀಂಕೊರ್ಟ್ ಆದೇಶದ ಅನುಗುಣವಾಗಿ ಇಲ್ಲ.
ಹೀಗಾಗಿ ನ. 5ರೊಳಗೆ ಕಾಯ್ದೆ ಮತ್ತು ಸುಪ್ರೀಂಕೋರ್ಟ್ ನಿರ್ದೇಶನಾನುಸಾರ ಹೊಸ ಮಾರ್ಗಸೂಚಿ ರೂಪಿಸಬೇಕು. ಅಲ್ಲಿಯವರೆಗೂ ಹೈಕೋರ್ಟ್ ಅನುಮತಿ ಇಲ್ಲದೇ ಕೆಎಸ್‌ಪಿಸಿಬಿ ಅಧ್ಯಕ್ಷರು, ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿಯ ನೇಮಕಾತಿ ನಡೆಸಬಾರದು ಎಂದು ನಿರ್ದೇಶಿಸಿ, ನ.9ಕ್ಕೆ ವಿಚಾರಣೆ ಮುಂದೂಡಿತು.
ಅರ್ಜಿದಾರರ ಕೋರಿಕೆ : ದೇಶದ ಎಲ್ಲ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರ ನೇಮಕಾತಿ ಗೆ ನಿರ್ದಿಷ್ಟ ಮಾರ್ಗಸೂಚಿ ರೂಪಿಸಬೇಕು ಎಂದು ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಗಳಿಗೆ 2017ರಲ್ಲಿ ಆದೇಶಿಸಿತ್ತು. ಆದರೆ, ಮಾರ್ಗಸೂಚಿ ರೂಪಿಸದೇ ಕೆಎಸ್ ಪಿಸಿಬಿ ಅಧ್ಯಕ್ಷರ ನೇಮಕಾತಿ ಮಾಡಿದ್ದರಿಂದ ಹೈಕೋರ್ಟ್ ನಿಯಮಗಳನ್ನು ನಿಗದಿಪಡಿಸುವಂತೆ ಆದೇಶಿಸಿತ್ತು. ಅದರಂತೆ ಅಧ್ಯಕ್ಷರ ನೇಮಕ ಸಂಬಂಧ ಮಾರ್ಗಸೂಚಿ ರೂಪಿಸಿರುವ ಸರ್ಕಾರ 2020 ರ ಜೂನ್. 19ರಂದು ಅಧಿಸೂಚನೆ ಹೊರಡಿಸಿದೆ.
ಆದರೆ, ಈ ಮಾರ್ಗಸೂಚಿ ಜಲ (ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ) ಕಾಯ್ದೆ ಸೆಕ್ಷನ್ 4(೨) ಮತ್ತು ಸುಪ್ರೀಂಕೋರ್ಟ್ ನಿರ್ದೇಶನಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಜಲ ಕಾಯ್ದೆಯ ಸೆಕ್ಷನ್ 4(೨) ಪ್ರಕಾರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗುವವರು ಪರಿಸರ ಸಂರಕ್ಷಣೆ ಕುರಿತು ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಅನುಭವ ಹೊಂದಿರಬೇಕು. ಆದರೆ, ಸರ್ಕಾರದ ಮಾರ್ಗಸೂಚಿಯಲ್ಲಿ ವಿಶೇಷ ಹಾಗೂ ಪ್ರಾಯೋಗಿಕ ಎಂಬ ಶಬ್ದಗಳನ್ನು ಕೈಬಿಡಲಾಗಿದೆ. ಮಂಡಳಿಯ ಸದಸ್ಯ ಕಾರ್ಯದರ್ಶಿಗೆ ಮಾಲಿನ್ಯ ನಿಯಂತ್ರಣ ಕುರಿತು ವೈಜ್ಞಾನಿಕ ಹಾಗೂ ತಾಂತ್ರಿಕ ವಿಚಾರಗಳಲ್ಲಿ ವಿದ್ಯಾರ್ಹತೆ, ಜ್ಞಾನ ಮತ್ತು ಅನುಭವ ಇರಬೇಕು. ಆದರೆ, ಆ ಸ್ಥಾನಕ್ಕೆ ಭಾರತೀಯ ಸೇವಾ ಆಯೋಗದ ಹಿರಿಯ ಅಧಿಕಾರಿಗಳನ್ನು ನೇಮಕ ಮಾಡಲು ಮಾರ್ಗಸೂಚಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಕಾಯ್ದೆ ಹಾಗೂ ಸುಪ್ರೀಂ ನಿರ್ದೇಶನಗಳಿಗೆ ಅನುಗುಣವಾಗಿ ಹೊಸ ಮಾರ್ಗಸೂಚಿ ರೂಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.