ಬೆಂಗಳೂರು: ಕೇಂದ್ರ ಚುನಾವಣೆ ಆಯೋಗ 15 ಕ್ಷೇತ್ರಗಳಿಗೆ ಉಪಚುನಾವಣೆಗೆ ವೇಳಾಪಟ್ಟಿ ಘೋಷಿಸಿದ ನಿರ್ಧಾರ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಅನರ್ಹತೆ ಪ್ರಕರಣದ ಅರ್ಜಿ ಇತ್ಯರ್ಥ ಪಡಿಸುವವರೆಗೆ ಉಪಚುನಾವಣೆ ನಡೆಸಲು ಅವಕಾಶ ನೀಡಬಾರದು. ಅಕ್ಟೋಬರ್ 21ರಂದು ನಡೆಯುವ ಉಪಚುನಾವಣೆಗೆ ತಡೆಯಾಜ್ಞೆ ನೀಡಬೇಕೆಂದು ಸುಪ್ರೀಂಕೋರ್ಟ್ನಲ್ಲಿ ಕಾನೂನು ಹೋರಾಟ ನಡೆಸಲು ಮುಂದಾಗಿದ್ದಾರೆ.
ಉಪಚುನಾವಣೆ ವೇಳಾಪಟ್ಟಿ ಘೋಷಣೆ ನಂತರ, ಸಭೆ ಸೇರಿ ಚರ್ಚೆ ನಡೆಸಿದ ಅನರ್ಹ ಶಾಸಕರು ಸೋಮವಾರ ಸುಪ್ರೀಂಕೋರ್ಟ್ನಲ್ಲಿ ಚುನಾವಣೆ ಆಯೋಗದ ಕ್ರಮವನ್ನು ಪ್ರಶ್ನಿಸಲಿದ್ದಾರೆ.
ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಉಪಚುನಾವಣೆ ನಡೆಯಬಹುದೆಂದು ನಿರೀಕ್ಷೆ ಮಾಡಿದ್ದ ಅನರ್ಹ ಶಾಸಕರಿಗೆ, ಏಕಾಏಕಿ ಕೇಂದ್ರ ಚುನಾವಣೆ ಆಯೋಗ ಉಪಚುನಾವಣೆಯ ದಿನಾಂಕ ಘೋಷಣೆ ಮಾಡಿರುವುದು ಶಾಕ್ ನೀಡಿದೆ.