ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯಲ್ಲಿ ಅಪ್ರೆಂಟಿಷಿಪ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಇಸ್ರೋದ ಅಧಿಕೃತ ವೆಬ್ಸೈಟ್ isro.gov.in ನಲ್ಲಿ ಅರ್ಜಿ ಹಾಕಬಹುದಾಗಿದೆ ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವುದಕ್ಕೆ ಜುಲೈ 22 ಕೊನೇ ದಿನವಾಗಿದ್ದು, ಅಭ್ಯರ್ಥಿಗಳು ಅರ್ಜಿಯನ್ನು ತುಂಬಿ ಪಿಡಿಎಫ್ ವರ್ಷನ್ನಲ್ಲಿ hqapprentice@isro.gov.inಗೆ ಇಮೇಲ್ ಮಾಡಬೇಕು. ಅರ್ಜಿಯ ಜೊತೆಗೆ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ/ಡಿಪ್ಲೊಮಾದ ಎಲ್ಲಾ ಸೆಮಿಸ್ಟರ್ಗಳ ಮಾರ್ಕ್ಸ್ ಕಾರ್ಡ್, ಡಿಗ್ರಿ/ಡಿಪ್ಲೊಮಾ ಅಥವಾ ಪ್ರಾವಿಷನಲ್ ಪ್ರಮಾಣಪತ್ರ ಹಾಗು ಎನ್‌ಎಟಿ ಎನ್ರೋಲ್ಮೆಂಟ್ ಸಂಖ್ಯೆಯ ಪಿಡಿಎಫ್ ಸಲ್ಲಿಸಬೇಕು.
ಗ್ರಾಜುಯೆಟ್ ಅಪ್ರೆಂಟಿಷಿಪ್ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದ ಅಂಗೀಕೃತ ವಿಶ್ವವಿದ್ಯಾಲಯದಿಂದ ಮೊದಲ ದರ್ಜೆಯಲ್ಲಿ ಎಂಜಿನಿಯರಿಂಗ್ ಡಿಗ್ರಿ ಮಾಡಿರಬೇಕು. ಟೆಕ್ನಿಷಿಯನ್ ಅಪ್ರೆಂಟಿಷಿಪ್ಗೆ ಅಂಗೀಕೃತ ರಾಜ್ಯ ಮಂಡಳಿಯಿಂದ ಡಿಪ್ಲೊಮಾ ಇನ್ ಎಂಜಿನಿಯರಿಂಗ್ನಲ್ಲಿ ಆಯಾ ಕ್ಷೇತ್ರದಲ್ಲಿ ಮೊದಲ ದರ್ಜೆಯಲ್ಲಿ ಅಂಕ ಪಡೆದಿರಬೇಕು. ಸರಾಸರಿ ಅಂಕ ಕನಿಷ್ಠ ಶೇ 60ರಷ್ಟು ಪಡೆದಿರಬೇಕು ಎಂದು ಅಧಿಸೂಚನೆ ಹೊರಡಿಸಿದೆ.
ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್ಗೆ ಹುದ್ದೆ ಅರ್ಜಿ ಹಾಕುವ ಅಭ್ಯರ್ಥಿಗಳು ಅಂಗೀಕೃತ ರಾಜ್ಯ ಮಂಡಳಿಯಿಂದ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್ ಕೋರ್ಸ್ ಪ್ರಥಮ ದರ್ಜೆಯಲ್ಲಿ ಪೂರೈಸಿರಬೇಕು. ಕನಿಷ್ಠ ಸರಾಸರಿ ಶೇ 60ರಷ್ಟು ಅಂಕ ಗಳಿಸಿರಬೇಕು.