ಬೆಂಗಳೂರು: ಕೆಜಿಎಫ್-2 ಸಿನಿಮಾ ಚಿತ್ರೀಕರಣಕ್ಕೆ ನೀಡಿರುವ ಅನುಮತಿಯನ್ನು ರದ್ದುಪಡಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಹುಬ್ಬಳ್ಳಿಯ ಜಿ. ಶಿವಶಂಕರ್ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ನಟಿಸುತ್ತಿರುವ ಹಿನ್ನೆಲೆಯಲ್ಲಿ ಚಿತ್ರಕ್ಕೆ ನೀಡಿರುವ ಅನುಮತಿ ರದ್ದುಪಡಿಸುವಂತೆ ಕೋರಿದ್ದಾರೆ. ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಹೊಂಬಾಳೆ ಫಿಲ್ಮ್ಂ ಸಂಸ್ಥೆ ಹಾಗೂ ನಟ ಸಂಜಯ್ ದತ್ ಅವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಅರ್ಜಿ ಇನ್ನು ವಿಚಾರಣೆಗೆ ನಿಗದಿಯಾಗಬೇಕಿದೆ.
ಅರ್ಜಿ ಸಾರಾಂಶ: ಕೆಜಿಎಫ್-2 ಚಿತ್ರದಲ್ಲಿ ನಟಿಸುತ್ತಿರುವ ಸಂಜಯ್ ದತ್ ವಿರುದ್ಧ ಟಾಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆಯೂ ಆಗಿತ್ತು. ಈ ಬಗ್ಗೆ ತಿಳಿದಿದ್ದರೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಂಜಯ್ ದತ್ ನಟನೆಯ ಕೆಜಿಎಫ್-2 ಸಿನಿಮಾದ ಚಿತ್ರೀಕರಣಕ್ಕೆ ಹಾಗೂ ಬಿಡುಗಡೆಗೆ ಅನುಮತಿ ನೀಡಿದ್ದಾರೆ.
ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಸಂಜಯ್ ದತ್ ಬಳಸಿಕೊಂಡು ಚಿತ್ರ ನಿರ್ಮಿಸಲಾಗುತ್ತಿದೆ. ಇದರಿಂದ ರಾಜ್ಯದ ಘನತೆಗೆ ಧಕ್ಕೆ ಉಂಟಾಗಿದೆ ಎಂದು ದೂರಿರುವ ಅರ್ಜಿದಾರರು, ಸಿನಿಮಾ ಚಿತ್ರೀಕರಿಸಲು ಹೋಂಬಾಳೆ ಫಿಲಿಂಸ್ಗೆ ನೀಡಿರುವ ಅನುಮತಿ ರದ್ದುಪಡಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಮತ್ತು ಅರ್ಜಿ ಇತ್ಯರ್ಥಗೊಳ್ಳುವವರೆಗೆ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದ್ದಾರೆ.