ಬೆಂಗಳೂರು : ಮೇಕೆದಾಟು ಕುಡಿಯುವ ನೀರು ಯೋಜನೆಗೆ ಅಗತ್ಯ ಮಂಜೂರಾತಿ ಕೊಡಿಸುವಂತೆ ಜಲಸಂಪನ್ಮೂಲ ಸಂಸದೀಯ ಸ್ಥಾಯಿ ಸಮಿತಿ ಮುಂದೆ ಮನವಿ ಮಾಡಲಾಗಿದೆ. ಜೊತೆಗೆ ಕಾವೇರಿ ವಿಚಾರ ಸೇರಿದಂತೆ ನೀರಾವರಿ ಸಮಸ್ಯೆಗಳನ್ನು ಪರಿಹರಿಸಬೇಕಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯದ ಬಗ್ಗೆ ಗಮನಹರಿಸಬೇಕು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಮನವಿ ಮಾಡಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಸಂಪನ್ಮೂಲ ಸ್ಥಾಯಿ ಸಮಿತಿಯ ಮುಂದೆ ಕಾವೇರಿ ಕಣಿವೆಯಲ್ಲಿ ರಾಜ್ಯಕ್ಕೆ ಹಾಗೂ ರೈತರಿಗೆ ಆಗಿರುವ ಅನ್ಯಾಯವನ್ನು ಮನವರಿಕೆ ಮಾಡಿಕೊಡಲಾಗಿದೆ. ಮೇಕೆದಾಟು ಯೋಜನೆಯು ನೀರಾವರಿ ಯೋಜನೆಯಲ್ಲ. ಕುಡಿಯುವ ನೀರಿನ ಯೋಜನೆಯಾಗಿರುವ ಕಾರಣ ಮಂಜೂರಾತಿ ನೀಡಬೇಕು. ಕಾವೇರಿ ಕಣಿವೆ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಕುರಿತು ಪರಿಹಾರದ ಬಗ್ಗೆ ಪ್ರಧಾನಿಯವರು ಮಧ್ಯಪ್ರವೇಶ ಮಾಡಬೇಕು. ಈ ಬಗ್ಗೆ ಈಗಾಗಲೇ ಮನವಿ ಕೂಡ ಮಾಡಲಾಗಿದೆ ಎಂದು ಹೇಳಿದರು.
ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಪರಿಹಾರ ಒದಗಿಸುವುದಾದರೆ ನನ್ನ ಸಹಕಾರ ಇರುತ್ತದೆ ಎಂದು ಹೇಳಿದ ಗೌಡರು, ಬೆಂಗಳೂರು ನಗರದ ಜನಸಂಖ್ಯೆ ಪ್ರಸ್ತುತ 1 ಕೋಟಿ 35 ಲಕ್ಷ ಇದ್ದು, 2044ರ ವೇಳೆಗೆ 3 ಕೋಟಿ ಜನಸಂಖ್ಯೆ ಆಗಬಹುದೆಂದು ಅಂದಾಜಿಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಜನಸಂಖ್ಯೆಗೆ 64 ಟಿಎಂಸಿ ನೀರಿನ ಅಗತ್ಯವಿದೆ. ಕಾವೇರಿ ಕಣಿವೆಯ ಕೆಆರ್ಎಸ್, ಸಾರಂಗಿ, ಕಬಿನಿ, ಹೇಮಾವತಿ ಜಲಾಶಯದಿಂದ ತಮಿಳುನಾಡಿಗೆ ಜೂನ್‍ನಿಂದ ಮೇ ನಡುವಿನ ಜಲವರ್ಷದಲ್ಲಿ 177.25 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಬೇಕು.
ಬರಗಾಲ ಮತ್ತು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ರಾಜ್ಯವನ್ನು ಇದು ಸಂಕಷ್ಟಕ್ಕೀಡು ಮಾಡಿದೆ. ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ತೀರ್ಪಿನಲ್ಲಿ ರಾಜ್ಯದ ರೈತರಿಗೆ ಒಂದು ಬೆಳೆಗೆ ಮಾತ್ರ ಜಲಾಶಯದ ನೀರು ಉಪಯೋಗಿಸಬೇಕು. ಆದರೆ, ತಮಿಳುನಾಡು ರೈತರು ಎರಡು ಬೆಳೆ ಬೆಳೆಯಬೇಕು ಎಂದು ಹೇಳಲಾಗಿದೆ. ಇದರಿಂದ ಹಾಸನ, ತುಮಕೂರು, ಮಂಡ್ಯ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಯ ರೈತರಿಗೆ ಘೋರ ಅನ್ಯಾಯವಾಗಿದೆ ಎಂದು ಅಂಕಿ - ಅಂಶಗಳ ಸಮೇತ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದರು.
ತಮಿಳುನಾಡು 24.71 ಲಕ್ಷ ಹೆಕ್ಟೇರ್ನಲ್ಲಿ ನೀರಾವರಿ ಸೌಲಭ್ಯ ಪಡೆದು ಮೂರು ಬೆಳೆ ಬೆಳೆಯುತ್ತಿದೆ. ನಮ್ಮ ರಾಜ್ಯದಲ್ಲಿ 18.85 ಲಕ್ಷ ಹೆಕ್ಟೇರ್ ಮಾತ್ರ ನೀರಾವರಿ ಇದೆ. ಕಾವೇರಿ ಕಣಿವೆ ಯೋಜನೆಗಳಿಗೆ ಕೇಂದ್ರ ಸರ್ಕಾರದ ತ್ವರಿತ ನೀರಾವರಿ ಅಭಿವೃದ್ಧಿ ಯೋಜನೆಯಡಿ ಅನುದಾನ ಒದಗಿಸಬೇಕೆಂದು ಮನವಿ ಮಾಡಲಾಗಿದೆ ಎಂದರು.
ನೀರಾವರಿ ಯೋಜನೆಗೆ ಸಂಬಂಧಿಸಿದಂತೆ 8 ಸಾವಿರ ಕೋಟಿ ರೂ. ಅನುದಾನ ರಾಜ್ಯಕ್ಕೆ ಬರಬೇಕಿದೆ. ಆ ಬಗ್ಗೆಯೂ ಪ್ರಸ್ತಾಪ ಮಾಡಲಾಗಿದೆ. ತಮ್ಮೊಂದಿಗೆ ಸಮಿತಿಯ ಸಭೆಯಲ್ಲಿ ಸಂಸದರಾದ ಡಿ.ಕೆ. ಸುರೇಶ್, ಶಿವಕುಮಾರ್ ಉದಾಸಿ ಅವರು ಕೂಡ ಭಾಗವಹಿಸಿದ್ದರು. ನಾನು 1962ರಿಂದಲೂ ನಿರಂತರವಾಗಿ ರೈತರ ಪರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ. ಕಾವೇರಿ ಸೇರಿದಂತೆ ರಾಜ್ಯದ ನೀರಾವರಿ ವಿಚಾರದಲ್ಲಿ ನಾಡಿನ ಮತ್ತು ರೈತರ ಪರವಾಗಿ ಮುಂದೆಯೂ ಹೋರಾಟ ಮಾಡುತ್ತೇನೆ ಎಂದರು.
ಇದನ್ನೂ ಓದಿ: ವಿಪಕ್ಷಗಳ I.N.D.I.A ಕೂಟಕ್ಕೆ ಬಿಎಸ್ಪಿ ಸೇರ್ಪಡೆ ಸಾಧ್ಯತೆ: 15 ರಂದು ಅಧಿಕೃತ ಘೋಷಣೆ?