ಬೆಂಗಳೂರು: ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆಯಿಂದ ಮಸೀದಿ - ಮದರಸಾಗಳಲ್ಲಿ ಕನ್ನಡ ಕಲಿಕಾ ಕೇಂದ್ರ ಆರಂಭಿಸಲು ಹಾಗೂ ಕನ್ನಡ ಸಂಸ್ಕೃತಿ ಶಿಬಿರ ನಡೆಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರಿಗೆ ಮನವಿ ಮಾಡಿದ್ದಾರೆ.
ಮತ್ತಿಕೆರೆಯ ಹೆಚ್ ಎಂಟಿ ಮುಖ್ಯರಸ್ತೆಯಲ್ಲಿರುವ, ಮಸ್ಜೀದ್ ಎ ತಾಹ, ಹೆಚ್ಬಿಆರ್ ಲೇಔಟ್ ನ ಫಲಾಹೇ ದಾರೇನ್ ಎಜುಕೇಶನಲ್ ಸೋಷಿಯಲ್ ಚಾರಿಟಬಲ್ ಟ್ರಸ್ಟ್, ಆರ್ ಕೆ ಹೆಗ್ಡೆನಗರದಲ್ಲಿರುವ ಆಲ್ ಫೈಜ್ ಟ್ರಸ್ಟ್ ನಲ್ಲಿ ಧರ್ಮಗುರುಗಳಿಗೆ ಹಾಗೂ ಮದ್ರಸಾ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಒಟ್ಟು ನಾಲ್ಕು ಶಿಬಿರಗಳನ್ನು ನಡೆಸುವಂತೆ ಬೇಡಿಕೆ ಇಟ್ಟಿದ್ದಾರೆ.
ಅಧ್ಯಕ್ಷರು ಭರವಸೆ ನೀಡಿದ್ದಾರೆ: ಈ ಬಗ್ಗೆ ಮಾತನಾಡಿದ ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆಯ ಸಮೀವುಲ್ಲಾ ಖಾನ್ , ಕಳೆದ ಹತ್ತು ಹದಿನೈದು ವರ್ಷಗಳ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಬರಗೂರು ಅವರ ಸಂದರ್ಭದಲ್ಲಿ ಮದ್ರಸಾಗಳಲ್ಲಿ ಕನ್ನಡ ಕಲಿಕಾ ಕೇಂದ್ರಗಳನ್ನು ಮಾಡಲಾಗಿತ್ತು. ಈಗ ಟಿ.ಎಸ್. ನಾಗಾಭರಣ ಅವರ ಕರೆ ಬಂದ ಹಿನ್ನಲೆ ಇಂದು ಸಭೆ ನಡೆಸಲಾಗಿದೆ. ಒಂದು ಎರಡು ಕೇಂದ್ರಗಳನ್ನು ಆರಂಭಿಸುವುದು ಅಷ್ಟೇ ಅಲ್ಲ ನಿರಂತರವಾಗಿ ಮಾಡುವ ಬಗ್ಗೆ ಅಧ್ಯಕ್ಷರು ಭರವಸೆ ನೀಡಿದ್ದಾರೆ ಎಂದರು.
ಸಕರಾತ್ಮವಾಗಿ ಸ್ಪಂದನೆ ಸಿಕ್ಕಿದೆ: ಮತ್ತಿಕೆರೆ ಮಸೀದಿ ಆವರಣದಲ್ಲಿ ಕನ್ನಡ ಕಲಿಕೆಗೆ ಶಾಶ್ವತ ಕಟ್ಟಡ ನಿರ್ಮಾಣ ಮಾಡಿರುವ ಬಗ್ಗೆಯೂ ಅಧ್ಯಕ್ಷರ ಗಮನಕ್ಕೆ ತಂದಿದ್ದೇವೆ. ಕನ್ನಡ ಕಲಿಕೆಯೊಂದಿಗೆ ಸಂಸ್ಕೃತಿ ಕಲಿಕೆಯ ಶಿಬಿರ ಭಾಗವಾಗಿ ಶಿಶುನಾಳ ಶರೀಫರ ಕೊಡುಗೆ, ಏಕೀಕರಣಕ್ಕೆ ರಂದಾನ್ ಸಾಬರ ಕೊಡುಗೆಗಳನ್ನು ಈಗಿನ ಪೀಳಿಗೆಯ ಮಕ್ಕಳ ಗಮನಕ್ಕೆ ತರಲು ಸಂಪನ್ಮೂಲ ವ್ಯಕ್ತಿಗಳ ಕೈಯಿಂದ ಮಾಡಿಸಲು ಕ್ರಮ ಕೈಗೊಳ್ಳಬೇಕೆಂದು ಅಧ್ಯಕ್ಷರ ಬಳಿ ಮನವಿ ಮಾಡಿದ್ದೇವೆ. ಇದಕ್ಕೆ ಸಕಾರಾತ್ಮವಾಗಿ ಸ್ಪಂದನೆ ಸಿಕ್ಕಿದೆ ಎಂದ ಅವರು, ಭಾಷೆಯೊಂದಿಗೆ ಕರ್ನಾಟಕ ಸೌಹಾರ್ದವಾಗಲಿ ಎಂದು ಆಶಿಸಿದರು.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ: ಅಧ್ಯಕ್ಷರಾದ ಟಿ.ಎಸ್. ನಾಗಾಭರಣ ಮಾತನಾಡಿ, ಭಾಷೆ ಕೇವಲ ವ್ಯವಹಾರಕ್ಕಷ್ಟೇ ಸೀಮಿತವಾಗಿಲ್ಲ. ಇದನ್ನೂ ಮೀರಿ, ಆತ್ಮೀಯತೆಯನ್ನು, ಸಹೋದರತ್ವವನ್ನು, ಬದುಕನ್ನು ಕಟ್ಟಿಕೊಡುತ್ತದೆ. ಹೀಗಾಗಿ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಇದನ್ನು ಒಪ್ಪಿಕೊಂಡು ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ಕೇವಲ ಕನ್ನಡ ಕಲಿ ಶಾಲೆಯನ್ನು ಪ್ರಾರಂಭಿಸುವುದು ಅಷ್ಟೇ ಅಲ್ಲ, ಕನ್ನಡದ ಬದುಕನ್ನು ಕೊಡಿ ಎಂದು ಇಚ್ಛೆ ಪಟ್ಟಿದ್ದಾರೆ. ಎಲ್ಲರೂ ಒಟ್ಟು ಸೇರಿ ಕನ್ನಡವನ್ನು ಕಟ್ಟೋಣ ಎಂದು ಆಶಯ ವ್ಯಕ್ತಪಡಿಸಿದರು.
ಓದಿ: ಸಿಎಂ ವಿರುದ್ಧ ಭ್ರಷ್ಟಾಚಾರ ಆರೋಪ: ತನಿಖೆಗೆ ಕೋರಿರುವ ದೂರಿನ ಆದೇಶ ಕಾಯ್ದಿರಿಸಿದ ಕೋರ್ಟ್