ಬೆಂಗಳೂರು: ಬಿಜೆಪಿ ಸದಸ್ಯ ರವಿಕುಮಾರ್ ಸದನದ ಕ್ಷಮೆಯಾಚಿಸಿದ ಹಿನ್ನೆಲೆ, ವಿಧಾನ ಪರಿಷತ್ ಕಲಾಪ ಮರು ಆರಂಭವಾಯಿತು. ಅರ್ಧ ಗಂಟೆಯ ನಂತರ ಆರಂಭವಾದ ಕಲಾಪದ ಆರಂಭದಲ್ಲಿ ಮಾತನಾಡಿದ ರವಿಕುಮಾರ್, ನಾನು ಆ ಉದ್ದೇಶದಿಂದ ಆಡಿದ ಮಾತಲ್ಲ, ನನ್ನ ಮಾತಿಂದ ಸದಸ್ಯರಿಗೆ ಬೇಸರವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದರು.
ಕಲಾಪ ಆರಂಭವಾಗಿ ಕಾಂಗ್ರೆಸ್ ಸದಸ್ಯ ಎಸ್.ಆರ್. ಪಾಟೀಲ್ ತಮ್ಮ ಮಾತು ಮುಂದುವರಿಸಿದರು. ಪೊಲೀಸರು ವಿವೇಚನಾ ರಹಿತರಾಗಿ ನಡೆದುಕೊಳ್ಳಬಾರದು. ಬಾಸ್ ಹೇಳಿದಂತೆ ಕಾರ್ಯ ನಿರ್ವಹಿಸಬಾರದು. ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು. ನಾನು ಪೊಲೀಸರ ನೈತಿಕತೆಯ ಅದಃಪಥನ ಮಾಡಲು ಬಯಸಲ್ಲ. ರಾಜ್ಯದ ಹಿತದೃಷ್ಟಿಯಿಂದ ನಡೆಯುತ್ತಿರುವ ಬೆಳವಣಿಗೆ ಸರಿಯಲ್ಲ. ಸರ್ಕಾರ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯನ್ನು ಸುಧಾರಿಸುವ ಕಾರ್ಯ ಮಾಡಲಿ ಎಂದು ಆಶಿಸಿದರು.
ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಮಾತನಾಡಿ, ಎಲ್ಲಕ್ಕಿಂತ ಕಾನೂನು ದೊಡ್ಡದು. ಹೀಗಾಗಿ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಇದರ ಬಗ್ಗೆ ಪ್ರಾಮಾಣಿಕ ತನಿಖೆ ನಡೆಸದಿದ್ದರೆ ಅದು ತಪ್ಪೆಸಗಿದವರ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದರು. ತನಿಖೆ ಯಾವ ಹಂತ ತಲುಪಿದೆ ಎನ್ನುವುದು ಗೊತ್ತು. ಇದರಿಂದ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳ ಮೂಲಕ ತನಿಖೆ ನಡೆಸಲಿ. ಅಲ್ಲದೇ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕ ಬಾಂಬ್ನ ತನಿಖೆ ಕೂಡ ನಡೆಸಬೇಕು ಎಂದು ಒತ್ತಾಯಿಸಿದರು.
ಕರಾವಳಿ ಭಾಗದ ಪ್ರತಿನಿಧಿಯಾಗಿರುವ ಐವಾನ್ ಡಿಸೋಜ ನಿಲುವಳಿ ಸೂಚನೆ ಅಡಿ ಮಾತನಾಡಿ, ಇಂತಹ ಘೋರ ಕೃತ್ಯ ನಡೆದಿದ್ದರೂ ಸರ್ಕಾರ ಪೊಲೀಸರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆರಾಮಾಗಿ ಕುಳಿತು ಅವರ ಜತೆ ಬಿರಿಯಾನಿ ಸೇವಿಸಿದ್ದಾರೆ. ಸರ್ಕಾರ ಗೋಲಿಬಾರ್ನಲ್ಲಿ ಮೃತಪಟ್ಟವರಿಗೆ ಪರಿಹಾರ ಕೊಟ್ಟಿಲ್ಲ. ಸರ್ಕಾರದ ಪ್ರತಿನಿಧಿಗಳು ಮೃತರ ಮನೆಗೆ ಹೋಗಿಲ್ಲ. ಮೃತರನ್ನೇ ಆರೋಪಿಗಳನ್ನಾಗಿ ಮಾಡಲಾಗಿದೆ ಎಂದರು. ಮಂಗಳೂರಿನಲ್ಲಿ ಕೇರಳಿಗರು ಇಲ್ಲದಿದ್ದರೆ ಬೆಳವಣಿಗೆ ಆಗುತ್ತಿರಲಿಲ್ಲ. ಕೇರಳ ಟೆರರಿಸ್ಟ್ಗಳು ಮಂಗಳೂರಿಗೆ ಬಂದಿದ್ದಾರೆ ಎಂದಿರಿ. ಒಬ್ಬರನ್ನಾದರೂ ಬಂಧಿಸಿದ್ದೀರಾ ಎಂದು ಪ್ರಶ್ನಿಸಿದರು.
ಅನಗತ್ಯ ಆರೋಪ ಮಾಡುತ್ತಿದ್ದೀರಿ. ತಪ್ಪು ಎಂದು ಖಂಡಿಸಿದವರ ವಿರುದ್ಧವೇ ದೇಶದ್ರೋಹದ ಪಟ್ಟ ಕಟ್ಟಲಾಗಿದೆ ಎಂದು ಹೇಳುತ್ತಿದ್ದಂತೆ, ಮಧ್ಯ ಪ್ರವೇಶಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಕೀಲರು ಚೆನ್ನಾಗಿ ಮಾತನಾಡುತ್ತಿದ್ದಾರೆ. ಆದರೆ ಏಕಮುಖ ವಾದ ಸರಿಯಲ್ಲ ಎಂದಾಗ ಪ್ರತಿಪಕ್ಷ ನಾಯಕರು ಆಕ್ರೋಶ ಹೊರಹಾಕಿದರು. ಕೋಟ ವಿರುದ್ಧ ಏಕಾಏಕಿ ಪ್ರತಿಪಕ್ಷ ಸದಸ್ಯರು ಮುಗಿಬಿದ್ದರು. ಶರತ್ ಮಡಿವಾಳ, ಅಶೋಕ್ ಪೂಜಾರಿ ಹತ್ಯೆಯಾದಾಗ ಇದೇ ಪ್ರತಿಪಕ್ಷದವರು ಆಡಳಿತ ಪಕ್ಷದಲ್ಲಿದ್ದರು. ಆಗ ಅವರು ಏನು ಮಾತನಾಡಿದ್ದರು ಅಂತ ನೆನಪಿಸಿಕೊಳ್ಳಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ಇಬ್ರಾಹಿಂ ಅದು ಗಲಾಟೆಯಲ್ಲಾದ ಸಾವು. ಇದು ಗೋಲಿಬಾರ್. ಎರಡಕ್ಕೂ ಹೋಲಿಕೆ ಬೇಡ ಎಂದರು. ರೈತರನ್ನು, ನಾಗರಿಕರನ್ನು ಗುಂಡಿಕ್ಕಿ ಕೊಲ್ಲುವ ಸರ್ಕಾರ ಬೇಕೆ ಎಂಬ ಮಾತನ್ನಾಡುತ್ತಿದ್ದಾರೆ ಜನ. ಸರ್ಕಾರ ತಾನು ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳಲು ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇಂತಹ ಸರ್ಕಾರ, ಆಡಳಿತ ಬೇಕೆ ಎನ್ನುವ ಭಾವನೆ ಮೂಡುತ್ತಿದೆ. ಉಭಯ ಪಕ್ಷದ ಸದಸ್ಯರು ಮಂಗಳೂರು ಗಲಾಟೆ ಸಂದರ್ಭದ ಚಿತ್ರ ತೋರಿಸಿ ಇವರು ಯಾರು ಎನ್ನುವ ಪ್ರಶ್ನೆ ಹಾಕಿ ಮತ್ತೆ ಗದ್ದಲ ಸೃಷ್ಟಿಸಿದರು ಎಂದರು.
ಈ ವೇಳೆ ಮಾತನಾಡಿದ ಸಿ.ಎಂ. ಇಬ್ರಾಹಿಂ ಎರಡೂ ಕಡೆ ವಾದ ಆಗುತ್ತಿದೆ. ಇದಕ್ಕೆ ನ್ಯಾಯಾಂಗ ತನಿಖೆಯಿಂದ ಮಾತ್ರ ಪರಿಹಾರ ಎಂದರು. ಗಲಾಟೆ ಮುಂದುವರಿದಾಗ ಸಮಾಧಾನಿಸುವ ಯತ್ನವನ್ನು ಸಭಾಪತಿ ಮಾಡಿದರು. ದೇಶದ್ರೋಹಿಗಳನ್ನು ಬೆಂಬಲಿಸುತ್ತೀರಿ ಎಂದು ಆಡಳಿತ ಪಕ್ಷದ ಸದಸ್ಯರು ಆರೋಪಿಸಿದರು. ಸರ್ಕಾರಕ್ಕೆ ಕಾಮನ್ ಸೆನ್ಸ್ ಇಲ್ಲ ಎಂದು ಐವಾನ್ ಡಿಸೋಜ ಆರೋಪಿಸಿದರು. ಸಾರ್ವಜನಿಕರ ಸ್ವತ್ತು ಹಾನಿಯಾಗಿದೆ ಎನ್ನುವುದಕ್ಕೆ ಆಧಾರ ಕೊಡಲಿ ಎಂದು ಸವಾಲು ಹಾಕಿದರು.
ಇನ್ನು, ಡಿಸಿಎಂ ಲಕ್ಷ್ಮಣ್ ಸವದಿ ಮಾತನಾಡಿ, ಇದೇ ರೀತಿ ಮಾತು ಮುಂದುವರಿಸಿದರೆ ಪೈಲ್ವಾನ್ ಅನ್ನಬೇಕಾಗುತ್ತದೆ. ಲೋಪದೋಶ ಇದ್ದರೆ ಕುಳಿತು ಮಾತಾಡಿ ಸರಿ ಪಡಿಸಿಕೊಳ್ಳೋಣ. ಶಾಂತಿ ಸುವ್ಯವಸ್ಥೆ ಬಗ್ಗೆ ಬೆಳಕು ಚೆಲ್ಲುವ ಕಾರ್ಯ ಮಾಡಿ. ತಪ್ಪು ಕಲ್ಪನೆ ಹಬ್ಬಿಸುವುದು ಬೇಡ. ಅನಗತ್ಯ ಆರೋಪ ಬೇಡ. ನಿಷೇಧಾಜ್ಞೆ ಜಾರಿಯಲ್ಲಿದ್ದಾಗ ದಯಮಾಡಿ ಬರುವುದು ಬೇಡ ಎಂದು ಮನವರಿಕೆ ಕಾರ್ಯವನ್ನ ಪೊಲೀಸರು ಮಾಡಿದ್ದಾರೆ ಎಂದರು. ಪ್ರತಿಪಕ್ಷ ನಾಯಕರ ಟಿಪಿ ತಲುಪಿದ ಹಾಗೂ ಅವರು ಬಂದ ದಿನ ಒಂದೇ ಆಗಿದ್ದರಿಂದ ಮೊದಲೇ ಸಮಜಾಯಿಷಿ ನೀಡಿ ವಾಪಸ್ ಕಳಿಸಿದ್ದಾರೆ ಎಂದು ವಿವರಿಸಿದರು.
ಎಸ್. ಆರ್. ಪಾಟೀಲ್ ಮಾತನಾಡಿ, ಟಿಪಿ ತಡವಾಗಿರಬಹುದು. ಆದರೆ ಅಧಿಕಾರಿಗಳಿಗೆ ಮೊದಲೇ ಮಾಹಿತಿ ಇತ್ತು. ಒಪ್ಪಿಗೆ ಪಡೆದಿದ್ದೆವು ಎಂದಾಗ ಬಿರುಸಿನ ಮಾತು ವಿನಿಮಯವಾದವು. ಘಟನೆಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಿದ್ದ ಗೃಹ ಸಚಿವರು, ಘಟನೆ ಪ್ರತಿಪಾದಿಸುತ್ತಿರುವುದು ಬೇಸರದ ಸಂಗತಿ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಿ.ಎಂ. ಇಬ್ರಾಹಿಂ, ಈ ಎರಡೂ ಕಡೆಯ ಸದಸ್ಯರು ತೋರಿಸಿದ ಫೋಟೋಗಳು ಸದನದ ಆಸ್ತಿ. ಎರಡನ್ನೂ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿಗಳು ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದರೆ, ಅವರ ಘನತೆ ಗಗನಕ್ಕೆ ಹೋಗುತ್ತದೆ ಎಂದು ಇಬ್ರಾಹಿಂ ಪುನರುಚ್ಛರಿಸಿದರು. ತನಿಖೆಗೆ ಆಗ್ರಹಿಸಿ ಐವಾನ್ ಡಿಸೋಜ ಮತ್ತಿತರ ಸದಸ್ಯರು ಬಾವಿಗಿಳಿದು ಪ್ರತಿಭಟನೆ ಮಾಡಿದರು. ಗೃಹ ಸಚಿವರು ಬರಬೇಕೆಂದು ಒತ್ತಾಯಿಸಿದರು. ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಸದನ ಕಲಾಪವನ್ನು ನಾಳೆ ಬೆಳಗ್ಗೆ 11 ಕ್ಕೆ ಮುಂದೂಡಿದರು.