ಬೆಂಗಳೂರು: ಅಫೆಕ್ಸ್ ಬ್ಯಾಂಕ್ ಅವ್ಯವಹಾರದ ಬಗ್ಗೆ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡದ ಕಾರಣ ಜೆಡಿಎಸ್ ಸದಸ್ಯರು ವಿಧಾನಸಭೆಯಲ್ಲಿ ಧರಣಿ ನಡೆಸಿದರು.
ಜೆಡಿಎಸ್ ಶಾಸಕರಾದ ಹೆಚ್.ಡಿ. ರೇವಣ್ಣ, ಎ.ಮಂಜುನಾಥ್ ಸೇರಿದಂತೆ ಮತ್ತಿತರರು ಅಫೆಕ್ಸ್ ಬ್ಯಾಂಕ್‍ನಲ್ಲಿ ನಡೆದಿದೆ ಎನ್ನಲಾದ 462 ಕೋಟಿ ಗೂ. ಅಧಿಕ ಮೊತ್ತದ ಅವ್ಯವಹಾರ ಕುರಿತು ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ರು. ಈ ವಿಚಾರ ನಿಲುವಳಿ ಸೂಚನೆಯಡಿ ಬರುವುದಿಲ್ಲ. ಬೇರೊಂದು ರೂಪದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ ಎಂದು ಸ್ಪೀಕರ್ ಭರವಸೆ ನೀಡಿದರು. ಆಗ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು, ನಿಲುವಳಿಯಡಿ ಬರುವುದಿಲ್ಲ ಎಂದ ಮೇಲೆ ಮತ್ತೆ ಚರ್ಚೆಗೆ ಕೊಡುವುದೇಕೆ? ಸರ್ಕಾರ ಇದನ್ನು ಯಾವ ರೀತಿ ಪರಿಭಾವಿಸಬೇಕು ಎಂದು ಪ್ರಶ್ನಿಸಿದರು. ಸಚಿವರ ಆಕ್ಷೇಪವನ್ನು ಪರಿಗಣಿಸಿದ ಸ್ಪೀಕರ್, ನಿಯಮ 69ರ ಅಡಿ ಸಂಜೆ ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ ಎಂದು ತಿಳಿಸಿದರು. ಆದರೆ ಇದನ್ನು ಕೇಳದ ಹೆಚ್.ಡಿ. ರೇವಣ್ಣ ಹಾಗೂ ಜೆಡಿಎಸ್ ಸದಸ್ಯರು, ನಿಲುವಳಿ ಸೂಚನೆಯ ಪೂರ್ವಭಾವಿ ಪ್ರಸ್ತಾಪಕ್ಕೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು. ಸ್ಪೀಕರ್ ಅದಕ್ಕೆ ಒಪ್ಪದಿದ್ದಾಗ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಸಭಾಧ್ಯಕ್ಷರು ಹೇಳಿದ್ದಾರೆ. ಧರಣಿ ಕೈಬಿಡಿ ಎಂದು ಕಾಂಗ್ರೆಸ್ ಸದಸ್ಯರು ಸಲಹೆ ನೀಡಿದ್ರು.
ಬಜೆಟ್ ಮೇಲೆ ಮಾತನಾಡುವಂತೆ ಸಭಾಧ್ಯಕ್ಷರು ಕಾಂಗ್ರೆಸ್ ಶಾಸಕ ಆರ್.ವಿ. ದೇಶಪಾಂಡೆ ಅವರಿಗೆ ಆಹ್ವಾನ ನೀಡಿದ್ರು. ಗಲಾಟೆ ಮಧ್ಯೆ ಮಾತನಾಡಲು ದೇಶಪಾಂಡೆ ಅವರು ಹಿಂದೇಟು ಹಾಕಿದಾಗ, ಬಿಜೆಪಿಯ ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ಅವಕಾಶ ನೀಡಬೇಕಾಗುತ್ತದೆ ಎಂದು ಸಭಾಧ್ಯಕ್ಷರು ತಿಳಿಸಿದರು. ಆದರೆ ಧರಣಿ ನಡೆಯುವ ಮಧ್ಯೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದ ದೇಶಪಾಂಡೆ ಅವರು ಜೆಡಿಎಸ್ ಶಾಸಕರ ಮನವೊಲಿಸಲು ಯತ್ನಿಸಿದರು. ಸ್ವಲ್ಪ ಕಾಲ ಸದನವನ್ನು ಮುಂದೂಡಿ ಜೆಡಿಎಸ್ ಸದಸ್ಯರ ಮನವೊಲಿಕೆ ಮಾಡಿ ಎಂದು ಕಾಂಗ್ರೆಸ್‍ನ ಹಿರಿಯ ಶಾಸಕ ಹೆಚ್.ಕೆ. ಪಾಟೀಲ್ ಸಲಹೆ ನೀಡಿದರು. ಆಡಳಿತ ಪಕ್ಷದ ಸಚಿವರು ಶಾಸಕರು ಜೆಡಿಎಸ್ ಶಾಸಕರ ಹಠಮಾರಿ ಧೊರಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಸಚಿವ ಸಿ.ಟಿ.ರವಿ ನಿಮ್ಮ ರಾಜಕಾರಣಕ್ಕೆ ಸದನವನ್ನು ವೇದಿಕೆ ಮಾಡಿಕೊಳ್ಳಬೇಡಿ ಎಂದು ತಿರುಗೇಟು ನೀಡಿದ್ರು.
ಜ್ಯೋತಿಷ್ಯ ವಿಷಯ: ಈ ವೇಳೆ ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡ ಮಧ್ಯಪ್ರವೇಶಿಸಿ, ಮಧ್ಯಾಹ್ನ ಒಂದು ಗಂಟೆಯೊಳಗೆ ಚರ್ಚೆ ಆಗಬೇಕೆಂದು ಜ್ಯೋತಿಷಿಗಳು ಹೇಳಿದ್ದಾರೆ. ಅದಕ್ಕಾಗಿ ರೇವಣ್ಣನವರು ಪಟ್ಟುಹಿಡಿದಿದ್ದಾರೆ ಎಂದು ಛೇಡಿಸಿದರು. ಯಾವುದೇ ವಿಷಯವನ್ನು ತಲೆಗೆ ಹಾಕಿಕೊಳ್ಳದೆ ರೇವಣ್ಣ ಮಾತ್ರ ಚರ್ಚೆಗೆ ಅವಕಾಶ ಕೊಡಿ, ನಿಮ್ಮ ಮಾತನ್ನು ನೀವು ಉಳಿಸಿಕೊಳ್ಳಿ ಎಂದು ಪಟ್ಟು ಹಿಡಿದರು.