ಬೆಂಗಳೂರು: ಸರ್ಕಾರ ಹಾಗೂ ಬಿಬಿಎಂಪಿ ಇನ್ನೂ ಕೂಡ ಕಸದಿಂದ ವಿದ್ಯುತ್ ತಯಾರಿಕಾ ಘಟಕ ಆರಂಭಕ್ಕೆ ಮೀನಾಮೇಷ ಎಣಿಸುತ್ತಿದೆ. ಆರು ಸಂಸ್ಥೆಗಳ ಜೊತೆ ಮಾತುಕತೆ ನಡೆದಿದ್ದರೂ ಇನ್ನೂ ಒಂದು ಸಂಸ್ಥೆಯೂ ಕಾರ್ಯಾರಂಭಗೊಳಿಸಿಲ್ಲ. ನಗರದಲ್ಲಿ ನಿತ್ಯ 4,500 ಮೆಟ್ರಿಕ್ ಟನ್ ಕಸ ಉತ್ಪತ್ತಿಯಾಗುತ್ತಿದ್ದರೂ ಗೊಬ್ಬರ ತಯಾರಿಕೆ ಹೊರತುಪಡಿಸಿ ಬೇರೆ ಯಾವುದೇ ರೀತಿ ಕಸ ಮರುಬಳಕೆಯಾಗುತ್ತಿಲ್ಲ.
ತ್ರೀವೇಸ್ಟ್, ಫ್ರೆಂಚ್ ಕಂಪನಿ ಜೊತೆ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ, ಜೂನ್ ತಿಂಗಳೊಳಗೆ ಘಟಕ ಸ್ಥಾಪಿಸದ ಕಾರಣ ಒಂದು ವರ್ಷದ ಹಿಂದೆ ಮಾಡಿಕೊಂಡಿದ್ದ ಈ ಒಪ್ಪಂದವನ್ನು ರದ್ದುಪಡಿಸಲಾಗಿದೆ. ಚಿಕ್ಕನಾಗಮಂಗಲದಲ್ಲಿ ನೀಡಿದ್ದ 15.03 ಎಕರೆ ಜಾಗವನ್ನೂ ವಶಕ್ಕೆ ಪಡೆಯಲಾಗಿದೆ.
500 ಮೆಟ್ರಿಕ್ ಟನ್ ಘನತ್ಯಾಜ್ಯದಿಂದ ನಿತ್ಯ 9.2 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಿ, ಪ್ರತಿ ಯೂನಿಟ್ಗೆ ₹7.08 ದರದಲ್ಲಿ ಬೆಸ್ಕಾಂಗೆ ನೀಡುವುದು ಈ ಒಪ್ಪಂದದ ಉದ್ದೇಶವಾಗಿತ್ತು. ಆದರೆ ಕಾರ್ಯಾರಂಭಕ್ಕೆ ಸಂಸ್ಥೆ ನಿರಾಸಕ್ತಿ ತೋರಿಸಿತ್ತು ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್ ತಿಳಿಸಿದ್ದಾರೆ.
ಎರಡು ವೇಸ್ಟ್ ಟು ಎನರ್ಜಿ ಫ್ಲಾಂಟ್ಗೆ ಒಪ್ಪಂದ ಅಂತಿಮ ಹಂತದಲ್ಲಿದ್ದು, ವಿದ್ಯುತ್ ಖರೀದಿ ಒಪ್ಪಂದಕ್ಕೆ ಮಾತ್ರ ಬಾಕಿಯಿದೆ. ಇಂಡಿಯಮ್ ಸಂಸ್ಥೆ ದೊಡ್ಡಬಿದರಕಲ್ಲಿನಲ್ಲಿ 200 ಟನ್ ಕಸದ ಸಂಸ್ಕರಣಾ ಘಟಕ ನಿರ್ಮಿಸಲಿದೆ. ಈ ಒಪ್ಪಂದಕ್ಕೆ ಈಗಾಗಲೇ ಸಹಿ ಹಾಕಲಾಗಿದೆ ಎಂದರು.
-ಸತಾರಾಂ ಸಾವಿರ ಟನ್ ವೇಸ್ಟ್ ಟು ಎನರ್ಜಿ ಫ್ಲಾಂಟ್ಅನ್ನು ಕನ್ನಹಳ್ಳಿಯಲ್ಲಿ ಮಾಡುತ್ತಿದೆ. ದಿನಕ್ಕೆ 600 ಟನ್ ಸಂಸ್ಕರಿಸುವ ಕೆಪಿಸಿಎಲ್ಆರ್ಡಿಎಫ್ ಫ್ಲಾಂಟ್ಅನ್ನು ಬಿಡದಿಯಲ್ಲಿ ನಿರ್ಮಿಸಲಾಗುತ್ತಿದ್ದು, ಎರಡು ಮೂರು ವಾರದೊಳಗೆ ಚಾಲನೆಗೆ ಬರಲಿದೆ.
-ಫಾರ್ಮ್ ಗ್ರೀನ್ ಸಂಸ್ಥೆ ಹಾಗೂ ಎನ್ಇಜಿ ಸಂಸ್ಥೆಗಳು ಮಾವಳ್ಳಿಪುರ ಮತ್ತು ನೆಕ್ಸಸ್ ನೋವೆಸ್ ಎಂಬ ಫಾರಿನ್ ಸಂಸ್ಥೆ ಮಾರೇನಹಳ್ಳಿ ಜಾಗದಲ್ಲಿ ಫ್ಲಾಂಟ್ ನಿರ್ಮಿಸಲು ಮುಂದೆ ಬಂದಿವೆ. ಈ ಕುರಿತ ಪ್ರಸ್ತಾವನೆ ಸರ್ಕಾರದ ಮುಂದಿದೆ. ಮೂರು ಸಂಸ್ಥೆಗಳು ಒಪ್ಪಂದದ ಹಂತದಲ್ಲಿ ಹಾಗೂ ಇನ್ನು ಮೂರು ಕಾರ್ಯರೂಪಕ್ಕೆ ಬರುವ ಹಂತದಲ್ಲಿವೆ. ಕಳೆದ ಒಂದು ವರ್ಷ ಯಾವುದೇ ಒಪ್ಪಂದಕ್ಕೂ ಸಹಿ ಹಾಕಿರಲಿಲ್ಲ ಎಂದರು.
ಸತಾರಾಂ ಹಾಗೂ ಇಂಡಿಯಮ್ ಸಂಸ್ಥೆಯ ವಿದ್ಯುತ್ ಘಟಕದಿಂದ 1500 ಟನ್ ಹಾಗೂ ಕೆಪಿಸಿಎಲ್ ಫ್ಲಾಂಟ್ನಿಂದ 600 ಟನ್ ಕಸ ಮರುಬಳಕೆ ಆಗಲಿದೆ. ಒಟ್ಟು 2 ಸಾವಿರ ಟನ್ ಮಿಶ್ರ ತ್ಯಾಜ್ಯ ಬಂದರೂ ಇದನ್ನು ಮರುಬಳಕೆ ಮಾಡಬಹುದು. ಜೊತೆಗೆ ಈಗಾಗಲೇ ಹಸಿ ಕಸದ ತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿ ಗೊಬ್ಬರವಾಗಿ ಪರಿವರ್ತಿಸಲಾಗುತ್ತಿದೆ ಎಂದರು.