ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದಡಿ ವಿಚಾರಣೆಗೆ ಒಳಗಾದ ನಿರೂಪಕಿ-ನಟಿ ಅನುಶ್ರೀ ಸದ್ಯ ತಮ್ಮ ಫೇಸ್ಬುಕ್ ಖಾತೆ ಮೂಲಕ ನೋವನ್ನು ಹೊರಹಾಕಿದ್ದಾರೆ.
ಮಂಗಳೂರು ಸಿಸಿಬಿ ಪೊಲೀಸರ ವಿಚಾರಣೆ ಎದುರಿಸಿದ ಬಳಿಕ ಬಹಳಷ್ಟು ನೋವನ್ನು ಅನುಭವಿಸುತ್ತಿದ್ದೇನೆ. ಸೆಪ್ಟೆಂಬರ್ 24, 2020ರಂದು ನಡೆದ ಆ ಘಟನೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. 12 ವರ್ಷಗಳ ಹಿಂದೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ವಿನ್ ಆಗಿದ್ದು, ಮತ್ತೆ ಅದೇ ನನ್ನ ಜೀವನದಲ್ಲಿ ಮುಳ್ಳಾಗಿ ಬರುತ್ತೆ ಎಂದು ಯೋಚನೆ ಮಾಡಿರಲಿಲ್ಲ. ಈ ವಿಡಿಯೋವನ್ನು ನನ್ನ ಸಮರ್ಥನೆಗೆ ಮಾಡುತ್ತಿಲ್ಲ. ಎಲ್ಲರೂ ಅವರವರ ಅಭಿಪ್ರಾಯ ಹೇಳತ್ತಿದ್ದಾರೆ. ಸಿಸಿಬಿ ವಿಚಾರಣೆಗೆ ಕರೆಯಲು ನೋಟಿಸ್ ಬಂದಿರುವುದು ಬೇಜಾರಾಗಿಲ್ಲ. ಸಿಸಿಬಿ ಕಚೇರಿಗೆ ಹೋದ ಕಾರಣ ನಾನು ಆರೋಪಿಯಲ್ಲ. ಆದರೆ ವಿಚಾರಣೆಗೆ ಒಳಗಾಗಿ ಹೊರ ಬಂದ ಬಳಿಕ ಕೇಳಿ ಬರುತ್ತಿರುವ ಮಾತುಗಳಿಂದ ಬೇಜಾರಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.
ನೋವು ಸಣ್ಣ ಪದ, ಆದ್ರೆ ಕಳೆದ ಒಂದು ವಾರದಿಂದ ಮನೆಯವರ ನೆಮ್ಮದಿ ಹಾಳಾಗಿದೆ. ಇದರಿಂದ ಮನಸ್ಸಿಗೆ ಬಹಳ ಬೇಜಾರಾಗುತ್ತಿದೆ. ಆದರೆ ಕಷ್ಟ ಕಾಲದಲ್ಲಿ ಕನ್ನಡಿಗರು ನನಗೆ ಧೈರ್ಯ ತುಂಬುತ್ತಿದ್ದಾರೆ. ಅವರಿಗೆ ಧನ್ಯವಾದ ಎಂದು ಕೈ ಮುಗಿದು ತಮ್ಮ ನೋವು ಹೊರಹಾಕಿದ್ದಾರೆ.
ಮಂಗಳೂರು ಪೊಲೀಸರು ಡ್ಯಾನ್ಸರ್ ಕಿಶೋರ್ ಶೆಟ್ಟಿ ಆಪ್ತ ತರುಣ್ ಹೇಳಿಕೆ ಮೇರೆಗೆ ಅನುಶ್ರೀ ಅವರನ್ನು ವಿಚಾರಣೆಗೆ ಒಳಪಡಿಸಿ ಕೆಲ ಮಾಹಿತಿಯನ್ನು ಕಲೆಹಾಕಿದ್ರು. ಸದ್ಯ ಅನುಶ್ರೀ ವಿಚಾರಣೆ ಬಳಿಕ ತಮಗಾದ ನೋವನ್ನು ಹೊರಹಾಕಿ ಕಣ್ಣೀರು ಹಾಕಿದ್ದಾರೆ.