ಬೆಂಗಳೂರು: ಅಂಬರ್ ಗ್ರೀಸ್(ತಿಮಿಂಗಲದ ವಾಂತಿ) ಕಳ್ಳಸಾಗಣೆ ಪ್ರಕರಣದ ಆರೋಪಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. 8.25 ಕೆ.ಜಿ. ತೂಕದ ಅಂಬರ್ ಗ್ರೀಸ್ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಕೊಡಗು ನಿವಾಸಿ ರಿಯಾಜ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಆರೋಪಿ 1 ಲಕ್ಷ ರೂ. ಮೊತ್ತಕ್ಕೆ ವೈಯಕ್ತಿಕ ಬಾಂಡ್ ನೀಡಬೇಕು. ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ನೀಡಬೇಕು. ಇದೇ ಮಾದರಿಯ ಪ್ರಕರಣಗಳಲ್ಲಿ ಭಾಗಿಯಾಗಬಾರದು. ಪ್ರಕರಣದ ಸಾಕ್ಷ್ಯಾಧಾರಗಳನ್ನು ತಿರುಚಬಾರದು. ತನಿಖಾಧಿಕಾರಿ ಮುಂದೆ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಎಂದು ಆರೋಪಿ ರಿಯಾಜ್‌ಗೆ ನ್ಯಾಯಾಲಯ ಷರತ್ತು ವಿಧಿಸಿದೆ.
ಪ್ರಕರಣದ ಹಿನ್ನೆಲೆ:
ಮೈಸೂರು ಅರಣ್ಯ ಸಂಚಾರ ದಳದ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ 2021ರ ಆ. 5ರಂದು ಕಾರೊಂದನ್ನು ತಡೆದು ಪರಿಶೀಲಿಸಿದ್ದರು. ಕಾರಿನಲ್ಲಿದ್ದ ನಾಲ್ವರು ಆರೋಪಿಗಳು 8.25 ಕೆ.ಜಿ ತೂಕದ ಬೆಲೆಬಾಳುವ ಅಂಬರ್ ಗ್ರೀಸ್ ಕಳ್ಳ ಸಾಗಣೆ ಮಾಡುತ್ತಿದ್ದುದು ಪತ್ತೆಯಾಗಿತ್ತು. ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವಿವಿಧ ಪ್ರಕರಣಗಳಡಿ ಎಫ್‌ಐಆರ್ ದಾಖಲಿಸಿದ್ದರು.
ರಿಯಾಜ್ ಪರವಾಗಿ ಅಂಬರ್ ಗ್ರೀಸ್ ಖರೀದಿಸಿರುವುದಾಗಿ ಬಂಧಿತ ಆರೋಪಿಗಳು ತಿಳಿಸಿದ್ದರು. ರಿಯಾಜ್‌ನನ್ನು ಪ್ರಕರಣದಲ್ಲಿ ಮೊದಲ ಆರೋಪಿಯನ್ನಾಗಿ ಮಾಡಲಾಗಿತ್ತು. ಬಂಧನ ಭೀತಿಯಿಂದ ರಿಯಾಜ್ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ.
ಇದನ್ನೂ ಓದಿ: ಹೆಲಿಕಾಪ್ಟರ್ ಪತನ: ಶೌರ್ಯಚಕ್ರ ಪುರಸ್ಕೃತ ಕ್ಯಾ.ವರುಣ್ ಸಿಂಗ್ ಆರೋಗ್ಯ ಸ್ಥಿತಿ ಸ್ಥಿರ, ಆದ್ರೂ ಗಂಭೀರ