ಬೆಂಗಳೂರು: ನಮ್ಮ ಮೆಟ್ರೋ ಹೊಸ ಮಾರ್ಗದ ನಿರ್ಮಾಣದಲ್ಲಿ ನಿರತವಾಗಿದ್ದ ಮತ್ತೊಂದು ಸುರಂಗ ಕೊರೆಯುವ ಯಂತ್ರ ಟಿಬಿಎಂ ತುಂಗಾ ಯಶಸ್ವಿಯಾಗಿ ಕಾರ್ಯಾಚರಣೆ ಮುಗಿಸಿ ಹೊರಬಂದಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಮೆಟ್ರೋದ ಅತಿ ಉದ್ದದ ಭೂಗತ ಸುರಂಗ ಮಾರ್ಗ ಕೊರೆಯುವಲ್ಲಿ ನಿರತವಾಗಿದ್ದ ತುಂಗಾ ಟಿಬಿಎಂ ಬುಧವಾರ ತನ್ನ ಎರಡು ನಿಗದಿತ ಕಾಮಗಾರಿ ಮುಗಿಸಿ ಕಾಡುಗೊಂಡನಹಳ್ಳಿ ನಿಲ್ದಾಣದಲ್ಲಿ ಹೊರಬಂದಿದೆ. ಈ ಕಾಮಗಾರಿ ಕಾಳೇನ ಅಗ್ರಹಾರದಿಂದ ಎಂಜಿ ಮಹಾತ್ಮ ಗಾಂಧಿ ರಸ್ತೆ ಹಾಗೂ ಮತ್ತು ಟ್ಯಾನರಿ ರಸ್ತೆಯ ಮೂಲಕ ನಾಗವಾರಕ್ಕೆ ಸಂಪರ್ಕ ಕಲ್ಪಿಸುವ 21.26 ಕಿ.ಮೀ ಉದ್ದದ ಮಾರ್ಗದ ಭಾಗವಾಗಿದೆ.
ತುಂಗಾ ಟಿಬಿಎಂ ವೆಂಕಟೇಶಪುರ ನಿಲ್ದಾಣ ಮತ್ತು ಶಾದಿ ಮಹಲ್ ನಡುವೆ 1064 ಮೀ ಸುರಂಗದ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ವೆಂಕಟೇಶಪುರ ನಿಲ್ದಾಣದಿಂದ ದಿನಾಂಕ ಅಕ್ಟೋಬರ್ 31ರಂದು ಈ ಸುರಂಗ ಮಾರ್ಗದ ಕಾಮಗಾರಿಯ ಕೆಲಸ ಆರಂಭಿಸಿತ್ತು. ಅದು ಇದೀಗ ಯಶಸ್ವಿಯಾಗಿ 1184.4 ಮೀಟರ್ ಕೆಲಸ ಪೂರ್ಣಗೊಳಿಸಿ, ಕೆಜಿ ಹಳ್ಳಿ ನಿಲ್ದಾಣದ ಬಳಿ ಹೊರಬಂದಿದೆ ಎಂದು ತಿಳಿಸಿದ್ದಾರೆ.
ಈ ಮೂಲಕ ಒಟ್ಟು, 20,992 ಮೀಟರ್‌ಗಳಲ್ಲಿ 18,832.30 ಮೀಟರ್ ಅಂದರೆ ಶೇ.89.70ರಷ್ಟು ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಂಡಂತಾಗಿದೆ. ಒಟ್ಟಾರೆ ರೀಚ್-6ರ ಸುರಂಗ ಮಾರ್ಗಕ್ಕಾಗಿ ನಿಯೋಜಿಸಲಾದ 9 ಟಿಬಿಎಂಗಳಲ್ಲಿ, 7 ಟಿಬಿಎಂಗಳು ಸುರಂಗ ಮಾರ್ಗದ ಕಾಮಗಾರಿಗಳನ್ನು ಪೂರ್ಣಗೊಳಿಸಿವೆ. ಪಿಂಕ್ ಲೈನ್‌ನಲ್ಲಿ ಒಟ್ಟು 18 ನಿಲ್ದಾಣಗಳಿವೆ, ಅವುಗಳಲ್ಲಿ 12 ಅಂಡರ್ ಗ್ರೌಂಡ್ ಮತ್ತು ಆರು ಸಾಮಾನ್ಯ ನಿಲ್ದಾಣಗಳಾಗಿವೆ ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ: ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿಯಲ್ಲಿ ಮತ್ತೊಂದು ಟಿಬಿಎಂ ಯಶಸ್ವಿ ಕಾರ್ಯಾಚರಣೆ ನಡೆಸಿ (ಅಕ್ಟೋಬರ್ 27-2023) ಹೊರಬಂದಿತ್ತು. ಮೆಟ್ರೋ ಎರಡನೇ ಹಂತದಲ್ಲಿ 100 ದಿನಗಳ ಕಾಲ ಭೂಗರ್ಭದಲ್ಲಿ ಸುರಂಗ ಕೊರೆದು ಸುರಂಗ ಪ್ರವೇಶಿಸಿದ್ದ ರುದ್ರ ಟಿಬಿಎಂ ಗುರುವಾರ ಯಶಸ್ವಿಯಾಗಿ ತನ್ನ ಮಿಷನ್ ಪೂರೈಸಿತ್ತು. ಜು. 14 ರಂದು ಸುರಂಗ ಕೊರೆಯುವ ಕಾಮಗಾರಿ ಆರಂಭಿಸಿದ್ದ "ಟಿಬಿಎಂ ರುದ್ರ" ಅ. 26ರವರೆಗೆ ಸುರಂಗ ಕೊರೆದು ಯಶಸ್ವಿ ಕಾರ್ಯಾಚರಣೆ ನಡೆಸಿತ್ತು. ಬರೋಬ್ಬರಿ 718 ಮೀಟರ್ ಸುರಂಗ ಕೊರೆದು ಲ್ಯಾಂಗ್ ಫೋರ್ಡ್ ನಿಲ್ದಾಣದ ಬಳಿ ಹೊರ ಬಂದಿದೆ ಎಂದು ನಮ್ಮ ಮೆಟ್ರೋ ಮಾಹಿತಿ ನೀಡಿತ್ತು.
ಇದನ್ನೂ ಓದಿ: ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ: ನೂರು ದಿನಗಳಲ್ಲಿ 718 ಮೀಟರ್ ಸುರಂಗ ಕೊರೆದು ಹೊರಬಂದ "ಟಿಬಿಎಂ ರುದ್ರ"....