ಬೆಂಗಳೂರು : ಹಂಪಿ ಎಕ್ಸ್‌ಪ್ರೆಸ್ ರೈಲು ಆಗಮನದ ವಿಳಂಬದಿಂದ ನೀಟ್ ಪರೀಕ್ಷೆಯಿಂದ ವಂಚಿತರಾಗಿದ್ದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಚೆನ್ನಾಗಿ ಪರೀಕ್ಷೆ ಬರೆಯುವಂತೆ ಮಾಜಿ ಸಚಿವ ಸುರೇಶ್ ಕುಮಾರ್ ಶುಭ ಕೋರಿದ್ದಾರೆ.
ನಿನ್ನೆ ನಡೆದ ನೀಟ್ ಪರೀಕ್ಷೆಗೆ ಬಹಳ ಜನ ಬಂದಿದ್ದರು. ಅದರಲ್ಲಿ 400 ಕ್ಕೂ ಹೆಚ್ಚು ಪರೀಕ್ಷಾರ್ಥಿಗಳು ಹಂಪಿ ಎಕ್ಸ್‌ಪ್ರೆಸ್ ರೈಲು ಏಳು ಗಂಟೆ ತಡವಾಗಿ ಬಂದಿದ್ದರಿಂದ ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾಗಿದ್ದರು. ಎರಡು ವರ್ಷ ಕಷ್ಟಪಟ್ಟು ಓದಿರುತ್ತಾರೆ, ಅವರೆಲ್ಲರ ಶ್ರಮ ನಿನ್ನೆ ನೀರಲ್ಲಿ ಹೋಮ ಮಾಡಿದಂತಾಗಿತ್ತು. ಆದರೆ ಇದೀಗ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿ, ರೈಲು ವಿಳಂಬದಿಂದ ಅವಕಾಶ ವಂಚಿತರಾದವರಿಗೆ ಮತ್ತೊಂದು ಅವಕಾಶ ನೀಡಲಾಗುತ್ತೆ ಅಂತ ಹೇಳಿದ್ದಾರೆ.
ಅವಕಾಶ ನೀಡುವಂತೆ ನಾನು ನಿನ್ನೆ ಟ್ವೀಟ್ ಮಾಡಿ ಹೇಳಿದ್ದೆ. ಸದಾನಂದಗೌಡರು ಕೂಡ ಕೇಂದ್ರ ಸಚಿವರ ಜೊತೆ ಮಾತಾಡಿದ್ದರು. ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಿದ್ದ ಅವರಿಗೆ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ ಅದಕ್ಕಾಗಿ, ಜಾವಡೇಕರ್ ಹಾಗೂ ಸದಾನಂದಗೌಡರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ.
ರೈಲು ವಿಳಂಬ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಳೆದು ತರಲಾಗಿತ್ತು. ವಿನಾಕಾರಣ ಮೋದಿಯವರನ್ನು ನಿಂದಿಸುವರಿಗೆ ಈಗಲಾದರೂ ಸದ್ಬುದ್ದಿ ಬರಲಿ ಎಂದು ಹಾರೈಸಿದ್ದಾರೆ.