ಬೆಂಗಳೂರು: ''ಚಂದ್ರಯಾನ-3ರ ಇಂದಿನ ಯಶಸ್ವಿ ಉಡಾವಣೆಯ ಮೂಲಕ ಚಂದ್ರನ ಅನ್ವೇಷಣೆಯಲ್ಲಿ ವಿಶ್ವದಲ್ಲೇ ಮತ್ತೊಂದು ವಿಶಿಷ್ಟ ಮೈಲಿಗಲ್ಲನ್ನು ಇಸ್ರೋ ಸಾಧಿಸಿದೆ'' ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರಾದ ಎನ್.ಎಸ್.ಭೋಸರಾಜು ಹರ್ಷ ವ್ಯಕ್ತಪಡಿಸಿದರು.
ಚಂದ್ರಯಾನ-3ರ ಉಡಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ''ನಿರಂತರ ಹೊಸ ಆವಿಷ್ಕಾರಗಳು ಮತ್ತು ಸಂಶೋಧನೆಯ ಮೂಲಕ ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತ ದೇಶ ವಿಶ್ವದಲ್ಲೇ ಮುಂಚೂಣಿ ಸ್ಥಾನ ಹೊಂದುವಲ್ಲಿ ಇಸ್ರೋ ಕೊಡುಗೆ ಅಪಾರ. ಚಂದ್ರಯಾನ -1 ಮತ್ತು 2ರ ಯಶಸ್ವಿ ಕಾರ್ಯಾಚರಣೆಗಳಿಂದ ಇಸ್ರೋ ಸಂಸ್ಥೆ ಬಾಹ್ಯಾಕಾಶ ಕ್ಷೇತ್ರದಲ್ಲಿ ದೊಡ್ಡ ಕನಸು ಕಾಣಲು ಅನುವು ಮಾಡಿಕೊಟ್ಟಿದೆ. ಇಂದಿನ ಈ ಯಶಸ್ವಿ ಕಾರ್ಯಾಚರಣೆ ವಿಶ್ವದ ಚಂದ್ರನ ಅನ್ವೇಷಣೆಯ ಕ್ಷೇತ್ರದಲ್ಲಿ ವಿಶೇಷ ಮೈಲಿಗಲ್ಲನ್ನು ಸಾಧಿಸಿದೆ'' ಎಂದಿದ್ದಾರೆ.
''ಮುಂದಿನ ದಿನಗಳಲ್ಲಿ ಚಂದ್ರನ ಮಣ್ಣಿನ ಮಾದರಿಗಳನ್ನು ಸಮರ್ಥವಾಗಿ ಮರಳಿ ತರುವ ಮೂಲಕ, ಚಂದ್ರನ ಮೇಲ್ಮೈನ ನಮ್ಮ ತಿಳಿವಳಿಕೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲು ಅನುವು ಮಾಡಿ ಕೊಡಲಿದೆ'' ಎಂದು ತಿಳಿಸಿದ್ದಾರೆ. ''ಚಂದ್ರಯಾನ- 3ರ ಯಶಸ್ಸನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಇಸ್ರೋ ವಿಜ್ಞಾನಿಗಳು ಕೈಗೊಂಡ ತಾಂತ್ರಿಕ ಪ್ರಗತಿ ಮತ್ತು ಅಂತಾರಾಷ್ಟ್ರೀಯ ಸಹಯೋಗಗಳು ಶ್ಲಾಘನೀಯ. ಇಂತಹ ಬದ್ಧತೆ ಮತ್ತು ನಿರಂತರ ಸಾಧನೆ ಭಾರತ ದೇಶವನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಸ್ಥಾನ ಪಡೆದುಕೊಳ್ಳಲು ಅನುವು ಮಾಡಿದೆ'' ಎಂದು ಹರ್ಷ ವ್ಯಕ್ತಪಡಿಸಿದರು.
ಸಿಎಂ ಟ್ವೀಟ್ ಮೂಲಕ ಸಂತಸ: ಚಂದ್ರಯಾನ ಮೂರು ಯಶಸ್ವಿ ಉಡಾವಣೆಗೆ ಟ್ವೀಟ್ ಮಾಡಿ ಶುಭಾಶಯ ಸಲ್ಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಂದ್ರಯಾನ 3 ಮಿಷನ್‌ನ ಯಶಸ್ವಿ ಉಡಾವಣೆಗಾಗಿ ಇಸ್ರೋಗೆ ಅಭಿನಂದನೆಗಳು. ಇದು ಭಾರತಕ್ಕೆ ಹೆಮ್ಮೆಯ ಕ್ಷಣ ಮತ್ತು ಭಾರತದ ಬಾಹ್ಯಾಕಾಶ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಹೊಸ ಮೈಲಿಗಲ್ಲು. ಈ ಸಾಧನೆಯು ಭಾರತದ ಯುವ ಮನಸ್ಸುಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಶೋಧನೆ ಮಾಡಲು ಪ್ರೇರೇಪಿಸುತ್ತದೆ ಎಂದಿದ್ದಾರೆ.
ಕುಮಾರಸ್ವಾಮಿ ಅಭಿನಂದನೆ: ಚಂದ್ರಯಾನ-3ರ ನೌಕೆಯನ್ನು ಯಶಸ್ವಿಯಾಗಿ ಕಕ್ಷೆಗೆ ಸೇರ್ಪಡೆ ಮಾಡಿದ ಇಸ್ರೋ ಹಾಗೂ ಬಾಹ್ಯಾಕಾಶ ವಿಜ್ಞಾನಿಗಳನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಅಭಿನಂದಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಮೆಲ್ಲರ ಕನಸು, ನಿರೀಕ್ಷೆಗಳು ಚಂದ್ರನೆಡೆಗೆ ಸಾಗುತ್ತಿವೆ. ಇಡೀ ದೇಶವೇ ಹೆಮ್ಮೆಪಡುತ್ತದೆ. 45 ದಿನಗಳ ಐತಿಹಾಸಿಕ ಚಂದ್ರಯಾನ-3 ಯಶಸ್ವಿಯಾಗಿ ಆರಂಭವಾಗಿದೆ. ಈ ಪ್ರಯತ್ನದಲ್ಲಿ ಸಂಪೂರ್ಣ ಯಶಸ್ಸು ಸಾಧಿಸಲಿದೆ ಎಂಬ ವಿಶ್ವಾಸ ನನ್ನದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇಸ್ರೋದ ಪ್ರತಿ ಯೋಜನೆಗೂ ಕರ್ನಾಟಕದ ಕೊಡುಗೆ ಇರುತ್ತದೆ. ಅದೇ ರೀತಿ, ಚಂದ್ರಯಾನ-3ಕ್ಕೂ ಕರುನಾಡಿನ ಕಾಣಿಕೆ ಅಪಾರ. ಜಗತ್ತು ಭಾರತವನ್ನು ಕರ್ನಾಟಕದ ಮೂಲಕ ನೋಡುವ ಈ ಅವಿಸ್ಮರಣೀಯ ಕ್ಷಣವನ್ನು ದೃಶ್ಯ ಮಾಧ್ಯಮದ ಮೂಲಕ ನಾನೂ ಕಣ್ತುಂಬಿಕೊಂಡೆ. ಉಡಾವಣೆಯಾದ ಕೆಲ ಕ್ಷಣಗಳಲ್ಲೇ ಚಂದ್ರಯಾನ-3 ನೌಕೆ ನಿಗದಿತ ಕಕ್ಷೆ ಸೇರಿದ್ದು, ಈ ಮೂಲಕ ಉಪಗ್ರಹವನ್ನು ಚಂದ್ರನ ಮೇಲೆ ಇಳಿಸುವ 6 ವಾರಗಳ ರೋಮಾಂಚನಕಾರಿ ಮಿಷನ್ಗೆ ಚಾಲನೆ ದೊರೆತಿದೆ. ಇಸ್ರೋ ಅಧ್ಯಕ್ಷ ಡಾ.ಸೋಮನಾಥ್ ಸೇರಿ ಅವರ ತಂಡದ ಎಲ್ಲಾ ವಿಜ್ಞಾನಿಗಳು, ತಾಂತ್ರಿಕ ನಿಪುಣರು, ಇತರೆ ಎಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಉಪಗ್ರಹ ಯಶಸ್ವಿಯಾಗಿ ಉಡ್ಡಯನ: ನಿಗದಿತ ಪಡಿಸಿದಂತೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್‌ಎಲ್‌ವಿ ಮಾರ್ಕ್-3 (ಎಲ್‌ವಿಎಂ-3) ಹೆವಿ-ಲಿಫ್ಟ್ ಉಪಗ್ರಹವು ಯಶಸ್ವಿಯಾಗಿ ಉಡಾವಣೆಗೊಂಡಿದೆ.
ಚಂದ್ರಯಾನ 3 ಮಿಷನ್ ಯೋಜನಾ ನಿರ್ದೇಶಕ ಪಿ.ವೀರಮುತ್ತುವೇಲ್ ಮತ್ತು ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಎಲ್‌ವಿಎಂ-3 ಎಂ-4 ವಾಹಕವು ಯಶಸ್ವಿಯಾಗಿ ಕಕ್ಷೆಗೆ ಉಡಾವಣೆಯಾದನಂತರ ತಮ್ಮ ಸಂತಸವನ್ನು ಹಂಚಿಕೊಂಡರು. ಚಂದ್ರಯಾನ-3 ಅದರ ನಿಗದಿಪಡಿಸಿದ ಕಕ್ಷೆಯಲ್ಲಿ ಚಂದ್ರನತ್ತ ತನ್ನ ಪ್ರಯಾಣ ಆರಂಭಿಸಿದೆ. ಬಾಹ್ಯಾಕಾಶ ನೌಕೆಯ ಸುರಕ್ಷಿತವಾಗಿ ಕಕ್ಷೆಯನ್ನು ತಲುಪಿದೆ ಎಂದು ಇಸ್ರೋ ತಿಳಿಸಿದೆ.
ಇದನ್ನೂ ಓದಿ: Chanrdarayan-3 Mission: ಚಂದ್ರನ ಅನ್ವೇಷಣೆಯಲ್ಲಿ ಭಾರತ ಸಕ್ರಿಯ ಆಟಗಾರನಾಗಿರಬೇಕು: ಇಸ್ರೋ ಮಾಜಿ ವಿಜ್ಞಾನಿ